Menu

ಸಂತ್ರಸ್ತರಿಗೆ ಪರಿಹಾರ ಘೋಷಿಸಿ ಸಿಎಂ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು: ಆರ್‌.ಅಶೋಕ

R Ashoka

ಸಿಎಂ ಸಿದ್ದರಾಮಯ್ಯ ಮೊದಲು ಪರಿಹಾರ ಘೋಷಣೆ ಮಾಡಿ ನಂತರ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಪರಿಹಾರವನ್ನೇ ತಿಳಿಸದೆ ಕೇವಲ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆಗಿರುವ ಪ್ರವಾಹದ ಸ್ಥಿತಿ ವೀಕ್ಷಿಸಲು ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ. ಎಲ್ಲ ರಸ್ತೆಗಳಲ್ಲಿ ಗುಂಡಿ ಇರುವುದರಿಂದ ಹಾಗೂ ರಸ್ತೆ ತಡೆದು ಜನರು ಪ್ರತಿಭಟಿಸುವುದರಿಂದ ಭಯಗೊಂಡ ಮುಖ್ಯಮಂತ್ರಿ ಹೆಲಿಕಾಪ್ಟರ್‌ನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ಜೋಳ ತೊಗರಿ ಸೇರಿದಂತೆ ಪ್ರತಿ ಬೆಳೆಗಳ ಹಾನಿ, ಮನೆ ಹಾನಿ, ಶಾಲೆ ಹಾನಿಗೆ ಎಷ್ಟು ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಬೇಕಿತ್ತು. ಆದರೆ ಈವರೆಗೆ ಸರ್ಕಾರ ಆದೇಶ ಮಾಡಿಲ್ಲ. ಒಂದು ಕಡೆ ಖಜಾನೆ ಖಾಲಿಯಾಗಿದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲು ಸಿದ್ಧತೆ ನಡೆದಿದೆ ಎಂದು  ಕಿಡಿ ಕಾರಿದರು.

ಮುಖ್ಯಮಂತ್ರಿಗಳು ಸಚಿವರ ತಂಡ ರಚಿಸಬೇಕಿತ್ತು. ಅಧಿಕಾರಿಗಳ ಸಭೆ ಕರೆದು ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಬೇಕಿತ್ತು. ಪುನರ್ವಸತಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಬೇಕಿತ್ತು. ಏನೂ ಮಾಡದೆಯೇ ಹೆಲಿಕಾಪ್ಟರ್‌ನಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ. ಈ ಸರ್ಕಾರ ಸಂತ್ರಸ್ತರಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕ್ರಾಂತಿಯಾಗುವ ಲಕ್ಷಣಗಳು ಕಂಡುಬಂದಿವೆ. ಕ್ರಾಂತಿಯ ನಂತರ ಸಿಎಂ ಬದಲಾವಣೆಯಾಗುವ ಲಕ್ಷಣವಿದೆ. ಸರ್ಕಾರ ಅಸ್ಥಿರಗೊಂಡು ಬಿದ್ದುಹೋದರೆ ಚುನಾವಣೆ ಮಾಡುವುದು ಸೂಕ್ತ. ನಾವು ಕಾಂಗ್ರೆಸ್‌ನಂತೆ ಸರ್ಕಾರ ಬೀಳಿಸಲು ಹೋಗಲ್ಲ. ಎರಡೂವರೆ ವರ್ಷಗಳಲ್ಲಿ ಸರ್ಕಾರ ಟೇಕಾಫ್‌ ಆಗಿಲ್ಲ. ಕಾಂಗ್ರೆಸ್‌ ಶಾಸಕರು ಹಾಗೂ ಸಚಿವರು ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವುದು ಸೂಕ್ತ ಎಂದು ಹೇಳಿದರು.

ಜಾತಿ ಸಮೀಕ್ಷೆಯಲ್ಲಿ ಸರ್ಕಾರ ಅನಗತ್ಯವಾದ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಜಾತಿ ಸಮೀಕ್ಷೆಯಲ್ಲಿ ತೀರಾ ವೈಯಕ್ತಿಕ ವಿಷಯ ಕೇಳಿದರೆ ಜನರು ಮಾಹಿತಿ ನೀಡದೇ ಇರಬಹುದು. ಇದು ಜನರಿಗೆ ಬಿಟ್ಟ ವಿಚಾರ ಎಂದು ಕೋರ್ಟ್‌ ಕೂಡ ಹೇಳಿದೆ. ಕೇಂದ್ರ ಸರ್ಕಾರ ಸಂವಿಧಾನದ ಪ್ರಕಾರ ತನ್ನ ಅಧಿಕಾರ ಚಲಾಯಿಸಿ ಜಾತಿ ಗಣತಿ, ಜನ ಗಣತಿ ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಸಮೀಕ್ಷೆಯ ಅಧಿಕಾರವೇ ಇಲ್ಲ ಎಂದರು.

ಸಮೀಕ್ಷೆ ಮಾಡುವವರಿಗೆ ತರಬೇತಿ ನೀಡಿಲ್ಲ. ಸಮೀಕ್ಷೆ ಮಾಡದ ಸಿಬ್ಬಂದಿಯನ್ನು ಅಮಾನತು ಮಾಡುತ್ತೇವೆ ಎಂದು ಬೆದರಿಕೆ ಒಡ್ಡಲಾಗಿದೆ. ರಾಜ್ಯ ಸರ್ಕಾರದಿಂದ ಸಮೀಕ್ಷೆ ಅಗತ್ಯವೇ ಇರಲಿಲ್ಲ. ಎರಡು ಕೋಟಿ ಮನೆಗಳ ಹಣೆಬರಹವನ್ನು ಎರಡೇ ದಿನಗಳಲ್ಲಿ ಬರೆಯಲು ಮುಂದಾಗಿದ್ದಾರೆ. ಜಾತಿ ಸಮೀಕ್ಷೆಯ ಕಾಲಂಗಳಲ್ಲಿ ಕೇವಲ ಜಾತಿ/ಧರ್ಮಕ್ಕೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಸಾಮಾಜಿಕ-ಶೈಕ್ಷಣಿಕದ ಅಂಶಗಳಿಲ್ಲ. ಸಮೀಕ್ಷೆ ಮುಗಿದ ನಂತರ ವರದಿಯನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಜಾತಿ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ, ಆದರೆ ಜಾತಿ/ಧರ್ಮ ಒಡೆಯುವ ಅಜೆಂಡಾಗೆ ನಮ್ಮ ವಿರೋಧವಿದೆ. ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದು, ಆ ನಡೆಯನ್ನೇ ಇಲ್ಲಿ ತೋರಿದ್ದಾರೆ. ಸಂವಿಧಾನದ ಅಡಿಯಲ್ಲಿ ಯಾವುದೇ ಜಾತಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.

ಬೆಂಗಳೂರಿನ ರಸ್ತೆ ಗುಂಡಿಗಳು ಸಾವಿನ ಗುಂಡಿಗಳಾಗಿವೆ. ಬೆಂಗಳೂರಿನಲ್ಲಿ ಒಬ್ಬ ಯುವತಿ ರಸ್ತೆ ಗುಂಡಿಯಿಂದಾಗಿ ಜೀವ ಕಳೆದುಕೊಂಡಿದ್ದಾಳೆ. ಈ ಸಾವಿಗೆ ಕಾರಣ ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಬೈಕ್‌ನಲ್ಲಿ ಓಡಾಡಿದರೂ, ಸಿಎಂ ನಗರ ಪ್ರದಕ್ಷಿಣೆ ಮಾಡಿದರೂ ಪ್ರಯೋಜನವಾಗಿಲ್ಲ. ಬಿಜೆಪಿ ಅವಧಿಯಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಅದಾದ ನಂತರ ಗುಂಡಿಗಳು ಉಂಟಾಗಿವೆ. ಆದರೂ ಈ ಸರ್ಕಾರ ದುರಸ್ತಿ ಮಾಡಿಲ್ಲ ಎಂದರು.

Related Posts

Leave a Reply

Your email address will not be published. Required fields are marked *