ಉ.ಕ(ಕಾರವಾರ): ಕಾರ್ಮಿಕರ ಏಳಿಗೆಗಾಗಿ ಕಾರ್ಮಿಕ ಇಲಾಖೆ ಕಟ್ಟಿಬದ್ಧವಾಗಿ ದುಡಿಯುತ್ತಿರೋದಾಗಿ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದರು.
ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಾರ್ಮಿಕ ಇಲಾಖೆಯ ವಿವಿಧ ವಲಯಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂತೋಷ್ ಲಾಡ್ ಮಾತನಾಡಿದರು.
ರಾಜ್ಯದಲ್ಲಿ ಪ್ರಸಕ್ತ ಆಡಳಿತರೂಢ ಕಾಂಗ್ರೆಸ್ ಸರ್ಕಾರದಲ್ಲಿ ತಾವು ಕಾರ್ಮಿಕ ಸಚಿವರಾದ ಬಳಿಕ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಏಳಿಗೆಗೆ ಹಲವು ಯೋಜನೆಗಳನ್ನು ತರಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಮಿಕ ಪರ ಇನ್ನಷ್ಟು ಯೋಜನೆಗಳು ಬರಲಿವೆ. ಕಾರ್ಮಿಕ ಇಲಾಖೆ ಮತ್ತು ಸರ್ಕಾರ ಕಾರ್ಮಿಕರ ಪರವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಮಿಕ ಇಲಾಖೆಯ ಯೋಜನೆಗಳನ್ನು ಪ್ರಚುರಪಡಿಸುವ ಜೊತೆ ಕಾರ್ಮಿಕರು ಅದರ ಲಾಭವನ್ನು ಪಡೆದುಕೊಳ್ಳಬೇಕು. ಕಾರ್ಮಿಕ ಇಲಾಖೆ ಕಾರ್ಮಿಕರ ಪರ ಎಂಬುದನ್ನು ಅರಿಯಬೇಕು. ಇಲಾಖೆ ಯೋಜನೆಗಳನ್ನು ತಿಳಿಸುವ ಜೊತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕಾರ್ಮಿಕರ ಸ್ಥಿತಿಗತಿ ಕುರಿತು ತಿಳಿಯುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಲಾಖೆಯಡಿ ವಿವಿಧ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಕೃಷ್ಣ ಸೈಲ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್, ಕಾರವಾರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಕಾರವಾರ ಡಿಸಿಸಿ ಅಧ್ಯಕ್ಷ ಸಾಯಿ ಕೇಶವ ಗಾಂವ್ಕರ್, ಗ್ಯಾರಂಟಿ ಅನುಷ್ಠಾನ ಜಿಲ್ಲಾಧ್ಯಕ್ಷ ರಾಣೆ ಹಾಗೂ ಸ್ಥಳೀಯ ಹಾಗೂ ಜಿಲ್ಲಾ ಜನಪ್ರತಿನಿಧಿಗಳು, ಕಾರ್ಮಿಕ ಇಲಾಖೆಧಿಕಾರಿಗಳು ಉಪಸ್ಥಿತರಿದ್ದರು.