ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಿಸಲಿದೆ. ಈ ಮೂಲಕ ಹೊಸ ವರ್ಷಕ್ಕೆ ಗ್ರಾಹಕರಿಗೆ ಬಿಗ್ ಶಾಕ್ ನೀಡಲು ಮುಂದಾಗಿದೆ.
ಮುಂದಿನ ಹಣಕಾಸು ವರ್ಷದಲ್ಲಿ ರಾಜ್ಯದ ವಿದ್ಯುತ್ ಗ್ರಾಹಕರು ಬಳಸುವ ವಿದ್ಯುತ್ ನ ಪ್ರತಿ ಯೂನಿಟ್ ಗೆ 10 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಗ್ರಾಹಕರು ಹೆಚ್ಚಿನ ಶುಲ್ಕ ಪಾವತಿಸಬೇಕಾಗುದೆ. ಆದರೆ ಇದನ್ನು ವಿದ್ಯುತ್ ದರ ಏರಿಕೆ ಅಥವಾ ಪರಿಷ್ಕರಣೆ ಎಂದು ಕರೆಯದೆ “ಟಾಪ್-ಅಪ್” ಅಥವಾ “ಟ್ರೂ-ಅಪ್” ಎನ್ನಬಹುದು ಎಂದು ಆಯೋಗ ಹೇಳಿದೆ.
ಪ್ರತೀ ವರ್ಷ ಏರಿಕೆಗೆ ನಿಯಮದಲ್ಲಿ ತಿದ್ದುಪಡಿ
ಮಾರ್ಚ್ 2025 ರಲ್ಲಿ KERC ವಿದ್ಯುತ್ ದರ ಪರಿಷ್ಕರಣೆಯನ್ನು ಘೋಷಿಸಿದಾಗ, ಮೂರು ವರ್ಷಗಳ ಕಾಲ ಸುಂಕಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ಆದರೆ ಮಾರುಕಟ್ಟೆಯ ಏರಿಳಿತಗಳು ಮತ್ತು ವಿದ್ಯುತ್ ಸರಬರಾಜು ಕಂಪನಿಗಳಲ್ಲಿರುವ (ಎಸ್ಕಾಮ್ಗಳು) ಬಾಕಿಗಳನ್ನು ಆಧರಿಸಿ ವಾರ್ಷಿಕವಾಗಿ ಸಣ್ಣ ಪ್ರಮಾಣದ ಏರಿಕೆ ಮಾಡಲು ನಿಯಮದಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಇದನ್ನೇ ಟಾಪ್-ಅಪ್ ಎಂದು ಕರೆಯಲಾಗುತ್ತದೆ ಎಂದು ಕೆಇಆರ್ಸಿ ಅಧ್ಯಕ್ಷ ಪಿ. ರವಿ ಕುಮಾರ್ ತಿಳಿಸಿದ್ದಾರೆ.
ಹೊಸ ಮಾದರಿಯಲ್ಲಿ ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ ನಡೆಯಲಿದೆ. ಟಾಪ್-ಅಪ್ ಎಲ್ಲಾ ಎಸ್ಕಾಂಗಳಿಗೆ ಸಮಾನವಾಗಿ ಅನ್ವಯವಾಗಲಿದ್ದು, ಪ್ರತಿ ಯೂನಿಟ್ಗೆ ಗರಿಷ್ಠ 8–10 ಪೈಸೆ ಮಾತ್ರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೃಷಿ ಸಬ್ಸಿಡಿಯಲ್ಲಿ ಕಡಿತಕ್ಕೆ ಸಲಹೆ
ಆರ್ಥಿಕ ಹೊರೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕೃಷಿ ವಿದ್ಯುತ್ ಸಬ್ಸಿಡಿ ಕಡಿತ ಮಾಡಲು ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಎಸ್ಕಾಂಗಳು ತಮ್ಮ ಲೆಕ್ಕಾಚಾರವನ್ನು ಪರಿಷ್ಕರಿಸಿ, ಪ್ರತಿ ಯೂನಿಟ್ಗೆ 8.3 ರೂ.ಇದ್ದ ಕೃಷಿ ಸಬ್ಸಿಡಿಯನ್ನು 7.7 ಕ್ಕೆ ಇಳಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಪ್ರಸ್ತಾವನೆ ಸಲ್ಲಿಸಿವೆ.
2025–26 ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಬೆಲೆ ಸ್ಥಿರವಾಗಿದ್ದು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿರಂತರ ಕಲ್ಲಿದ್ದಲು ಪೂರೈಕೆ ಲಭ್ಯವಿದ್ದ ಕಾರಣ ಆಮದು ಕಲ್ಲಿದ್ದಲಿನ ಅವಶ್ಯಕತೆ ಕಡಿಮೆಯಾಗಿದೆ. ಜೊತೆಗೆ ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉತ್ಪಾದನೆ ಮತ್ತು ಸರಬರಾಜು ವೆಚ್ಚಗಳು ವಿಭಿನ್ನವಾಗಿವೆ.
ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಕಂಡುಬರುತ್ತದೆ. ಆದರೆ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಬೇಕಿರುವುದರಿಂದ ದರದಲ್ಲಿ ಕಡಿತ ಸಾಧ್ಯವಿಲ್ಲ. ಬದಲಾಗಿ ಈ ವರ್ಷವೂ ವಿದ್ಯುತ್ ದರದಲ್ಲಿ ಏರಿಕೆ ಮಾಡಬೇಕಿದೆ ಎಂದು ಅವರು ಹೇಳಿದರು.


