ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಪ್ರಕರಣ ಸಂಬಂಧ ಎಸ್‌ಐಟಿ ತನಿಖಾ ಕಾರ್ಯಾಚರಣೆ ಕೈಗೊಂಡಿದ್ದು, ಅಸ್ಥಿಪಂಜರ ಶೋಧ ವೇಳೆ ಪತ್ತೆಯಾಗಿರುವ ಪಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳ ವಾರಸುದಾರರನ್ನು ಗುರುತು ಹಿಡಿಯಲಾಗಿದೆ.
ನೆಲಮಂಗಲ ತಾಲೂಕಿನ ವೀರಸಾಗರದ ಸುರೇಶ್ ಎಂಬವರ ಪಾನ್ ಕಾರ್ಡ್ ಮತ್ತು ಅವರ ತಾಯಿ ಸಿದ್ದಲಕ್ಷ್ಮಮ್ಮರ ಡೆಬಿಟ್ ಕಾರ್ಡ್ ಪತ್ತೆಯಾಗಿತ್ತು, ದಾಬಸ್ ಪೇಟೆಯ ವೀರಸಾಗರ ನಿವಾಸಿಯಾಗಿದ್ದ ಸುರೇಶ್ ಅವರು ಗಂಗಮರಿಯಪ್ಪ, ಸಿದ್ದಲಕ್ಷ್ಮಮ್ಮ ಅವರ ಮಗ. ಸುರೇಶ್ ಎರಡು ವರ್ಷದ ಹಿಂದೆ ನಮ್ಮನ್ನು ಬಿಟ್ಟು ಹೋಗಿದ್ದ, ಆತನಿಗೆ ಜಾಂಡೀಸ್ ಬಂದು ಐದು ತಿಂಗಳ ಹಿಂದೆ ಸತ್ತುಹೋಗಿದ್ದ. ಅವನನ್ನು ನಮ್ಮೂರಿನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ ಧರ್ಮಸ್ಥಳದಲ್ಲಿ ಸಿಕ್ಕಿರುವ ಪಾನ್ ಕಾರ್ಡ್, ಡೆಬಿಟ್ ಕಾರ್ಡ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಂದೆ ಗಂಗಮರಿಯಪ್ಪ ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಎಸ್‌ಐಟಿಯಿಂದ ಶವಗಳಿಗಾಗಿ ಹುಡುಕಾಟ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದೆ. ಬುಧವಾರ ಅನಾಮಿಕ ವ್ಯಕ್ತಿ ತಿಳಿಸಿದ ಆರನೇ ಗುಂಡಿಯಲ್ಲಿ ಮೃತದೇಹದ ಅಸ್ಥಿಪಂಜರ ಲಭ್ಯವಾಗಿದೆ.