ಕೊಡಗು ಜಿಲ್ಲೆಯ ವಿರಾಜಪೇಟೆ ಪಾಲಿಬೆಟ್ಟ ಬಳಿಯ ಎಮ್ಮೆಗುಂಡಿ ತೋಟದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ. ಹಾಸನ ಸಮೀಪದ ರಾಮನಾಥಪುರದ ಹನುಮಂತ (57) ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ.
ಇತ್ತೀಚೆಗೆ ರಾಜ್ಯದಲ್ಲಿ ಕಾಡು ಪ್ರಾಣಿಗಳ ದಾಳಿಗೆ ಹಲವರು ಬಲಿಯಾಗುತ್ತಿದ್ದಾರೆ, ಕಾಡಾನೆ ಮತ್ತು ಹುಲಿ ದಾಳಿಯಿಂದಾಗಿ ಹಲವು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ರಾಮನಾಥಪುರದ ಹನುಮಂತ ಆನೆ ದಾಳಿಗೆ ಸಿಲುಕಿ ಎದೆ ಮತ್ತು ಹೊಟ್ಟೆಯ ಮೇಲೆ ತೀವ್ರ ಗಾಯಗಳಾಗಿದ್ದವು.
ಅವರು ಕಳೆದ 30 ವರ್ಷಗಳಿಂದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಲೈನ್ ಹೌಸ್‌ನಲ್ಲಿ ವಾಸಿಸುತ್ತಿದ್ದರು. ತೋಟದಲ್ಲಿ ಆನೆ ಟ್ರ್ಯಾಕರ್ ಆಗಿ ಕೆಲಸ ಮಾಡುತ್ತಿದ್ದರು. ಪರಿಸರದಲ್ಲಿ ಆನೆಗಳ ಇರುವಿಕೆ ಬಗ್ಗೆ ಇತರ ಕಾರ್ಮಿಕರಿಗೆ ಎಚ್ಚರಿಕೆ ನೀಡುವ ಕೆಲಸ ಅವರದಾಗಿತ್ತು. ಇದೇ ವೇಳೆ ದಾಳಿಗೆ ಬಲಿಯಾಗಿದ್ದು, ಸಹ ಕಾರ್ಮಿಕ ಆನೆ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶವಪರೀಕ್ಷೆಯ ಬಳಿಕ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲಾಗಿದೆ.
ಕಳೆದ ತಿಂಗಳು ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ರೈತ ಗಣೇಶ (55)ಮತ್ತು ನಿಂಗಯ್ಯ(65) ಮೃತಪಟ್ಟಿದ್ದರು. ಆನೆ ತುಳಿತಕ್ಕೆ ಹಾಡಿ ನಿವಾಸಿ ವಸಂತ್(36) ಬಲಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕೆರೆಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು. ಇದರಿಂದಾಗಿ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ವ್ಯಕ್ತಪಡಿಸಿದ್ದರು.


