Menu

ದೇವದಾಸಿ ಪದ್ಧತಿ ನಡೆದರೆ ಎಸ್ ಪಿ- ಡಿಸಿ ವಿರುದ್ಧ ಮುಲಾಜಿಲ್ಲದೇ ಕ್ರಮ: ಸಿಎಂ ಎಚ್ಚರಿಕೆ

ದೇವದಾಸಿ ಪದ್ಧತಿ ನಿಷೇಧ ಆಗಿದೆ. ಎಲ್ಲಿಯಾದರೂ ನಡೆದದ್ದು ಗಮನಕ್ಕೆ ಬಂದರೆ SP-DC ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಬೇಲ್ ಸಿಕ್ಕರೆ ಅದು ನಿಮ್ಮ ದೌರ್ಬಲ್ಯ. ಹೀಗಾದರೆ ಜಾತಿ ದೌರ್ಜನ್ಯ ತಡೆಗಟ್ಟುವುದು ಸಾಧ್ಯವಿಲ್ಲ ಎಂದರು.

ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಕ್ಕರೆ, ಮೇಲ್ಮನವಿ ಹೋಗಿ ಜಾಮೀನು ರದ್ದುಪಡಿಸಿ ಆರೋಪಿಗೆ ಶಿಕ್ಷೆ ಕೊಡಿಸಿದ ಪ್ರಕರಣಗಳು ಎಷ್ಟಿವೆ ? ಈ ಬಗ್ಗೆ ವಿವರ ಕೊಡಿ ಎಂದು ಅವರು ಪ್ರಶ್ನಿಸಿದರು.

ಪೊಲೀಸ್ ಇಲಾಖೆಯಲ್ಲಿ ಸೀನಿಯರಿಟಿ ಪಟ್ಟಿಯಲ್ಲಿ ಉಲ್ಲಂಘನೆ ಆಗಿ ಪರಿಶಿಷ್ಠರಿಗೆ ಅನ್ಯಾಯ ಆಗುತ್ತಿದೆ. ಸಮಿತಿ ಮುಂದೆ ದೂರು ಬಂದು ನಾವು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಸಂಸದ ಈ.ತುಕಾರಾಮ್ ಮತ್ತು ಶಾಸಕ ನರೇಂದ್ರಸ್ವಾಮಿ ಆರೋಪಿಸಿರು. ಇದರಿಂದ ಅಸಮಾಧಾನಗೊಂಡ ಸಿಎಂ ಈ ವಿಚಾರವನ್ನು ಮುಂದಿನ ಕ್ಯಾಬಿನೆಟ್ ಗೆ ತರಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.

ಬ್ಯಾಕ್ ಲಾಗ್ ಮತ್ತು ಬಡ್ತಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಸಬ್ ಕಮಿಟಿ ಪತ್ತೆ ಹಚ್ಚಿ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದೀರಿ. ಹಾಗಾದರೆ ಸಬ್ ಕಮಿಟಿ ಕೊಡುವ ವರದಿಗಳಿಗೆ ಬೆಲೆ ಇಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಅವರು ಸಭೆಯ ಗಮನಕ್ಕೆ ತಂದರು.

ಜಾತಿ ದೌರ್ಜನ್ಯ ದೂರು ಬಂದಾಗ ಪೊಲೀಸರೇ ಕೌಂಟರ್ ದೂರು ಪಡೆದು ಪ್ರಕರಣ ದುರ್ಬಲಗೊಳಿಸುವ ಬಗ್ಗೆ ದೂರುಗಳು ಬಂದರೆ ಅದನ್ನು ಸಹಿಸಲ್ಲ. ನಮ್ಮ ಗಮನಕ್ಕೆ ಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ತಗೊತೀವಿ. ಎಲ್ಲಾ ಇಲಾಖೆಗಳೂ ಬಡ್ತಿಯಲ್ಲಿ ಮೀಸಲಾತಿಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಪರಿಶಿಷ್ಢ ಸಮುದಾಯದವರಿಗೆ ಅವಕಾಶ ತಪ್ಪಿಸಲು ಅಧಿಕಾರಿಗಳು ಕುಟಿಲ ನೀತಿ ಅನುಸರಿಸಿದರೆ ಸಹಿಸಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಇಲಾಖಾವಾರು ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಪರಿಶೀಲಿಸಲು ಪ್ರತ್ಯೇಕ Review ಮೀಟಿಂಗ್ ಕರೆಯುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.

ಪ್ರತೀ ಆರು ತಿಂಗಳಿಗೊಮ್ಮೆ ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಕರೆಯುತ್ತೇವೆ. ಈ ಸಭೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಎಚ್ಚರಿಸಿದರು.

Related Posts

Leave a Reply

Your email address will not be published. Required fields are marked *