Menu

ಫೆ. 10ರೊಳಗೆ ಖಾತಾ ನೀಡಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸಿಎಂ ಖಡಕ್‌ ಸೂಚನೆ

ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ  ಫೆಬ್ರವರಿ 10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಖಡಕ್‌ ಸೂಚನೆ ನೀಡಿದ್ದಾರೆ.

ಖಾತಾ ವಿಚಾರದಲ್ಲಿ  ಆಗುತ್ತಿರುವ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಇದಕ್ಕೆ ಪರಸ್ಪರ ಹೊಂದಾಣಿಕೆಯಿಂದ  ಇಲಾಖೆಗಳು ಕಾರ್ಯ ನಿರ್ವಹಿಸಬೇಕು. ಒಂದೇ ಸೈಟನ್ನು ಹಲವರಿಗೆ ಮಾರುವ ವಂಚನೆಗೆ ಸಂಪೂರ್ಣ ಬ್ರೇಕ್ ಹಾಕಲೇಬೇಕು ಎಂದು ಹೇಳಿದ್ದಾರೆ.

ನಕಲಿ ದಾಖಲೆಗಳ ಪರಿಶೀಲಿಸದೆ ಆಸ್ತಿ ನೋಂದಣಿ ವಿಚಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿಎಂ, ಇದೆಲ್ಲಕ್ಕೂ ಕಡಿವಾಣ ಅಗತ್ಯ ಎಂದರು. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಹಲವು ಸೂಚನೆ ನೀಡಿದರು.

ಬಿಬಿಎಂಪಿಯಲ್ಲಿ  15 ಲಕ್ಷ ಆಸ್ತಿಗಳು, ಸ್ಥಳೀಯ ಸಂಸ್ಥೆಗಳಲ್ಲಿ  30 ಲಕ್ಷ ಆಸ್ತಿಗಳು, ಗ್ರಾಮ ಪಂಚಾಯತ್‌ಗಳಲ್ಲಿ 90 ಲಕ್ಷ ಆಸ್ತಿಗಳು ಖಾತಾ ದಾಖಲೆ ಹೊಂದಿರುವುದಿಲ್ಲ.. ಇದರಿಂದ ತೆರಿಗೆ ಕಟ್ಟದೆ ಸಾವಿರಾರು ಕೋಟಿ ರೂ. ತೆರಿಗೆ ಪ್ರತೀ ವರ್ಷ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳು ಖಾತಾ ನೀಡಿರುವ ಆಸ್ತಿಗಳನ್ನು ಮಾತ್ರ ನೋಂದಣಿ ಇಲಾಖೆಯಡಿ ನೋಂದಣಿ ಮಾಡಬೇಕು. ಸ್ಥಳೀಯ ಸಂಸ್ಥೆಗಳು ನೀಡಿರುವ ಖಾತಾ ದಾಖಲೆಗಳ ಡಾಟಾಬೇಸ್‌ ಕಂಪ್ಯೂಟರ್‌ನಲ್ಲಿ ಇರಬೇಕು. ಈ ಡಾಟಾ ಬೇಸ್‌ ಆಧರಿಸಿ ನೋಂದಣಿ ಪ್ರಕ್ರಿಯೆ ಮಾಡಬೇಕು ಎಂದಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒನ್ ಟೈಮ್‌ ಪರಿಹಾರ ನೀಡುವ ಬಗ್ಗೆ  ನಿರ್ಧಾರ ಕೈಗೊಳ್ಳಲಾಗುವುದು. ಈ ವ್ಯಾಪ್ತಿಯಲ್ಲಿ ಖಾತಾ ನೀಡಿರುವುದನ್ನು ಡಾಟಾ ಬೇಸ್‌ನಲ್ಲಿ ಹಾಕಬೇಕು. ಇದರಿಂದ ಖಾತೆ ಆದ ಆಸ್ತಿಗಳನ್ನು ಮಾತ್ರ ನೋಂದಣಿ ಮಾಡಬಹುದು ಎಂದರು.

ಕಂದಾಯ ಜಮೀನಿನಲ್ಲಿ ಲೇಔಟ್‌ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಈಗಾಗಲೇ ಇರುವ ಅಂತಹ ಲೇಔಟ್‌ಗಳ ಕುರಿತು ಸೂಕ್ತ ಕ್ರಮ‌ ಕೈಗೊಳ್ಳಬೇಕು.  ನಿವೇಶನಗಳಲ್ಲಿರುವ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳಾಗಿ ಪರಿಗಣಿಸುವ ಕುರಿತು ಕ್ರಮ ಪರಿಶೀಲಿಸಬೇಕು ಎಂದರು.

ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಇನ್ನಷ್ಟು ಸರಳೀಕರಣಗೊಳಿಸಲು ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.

Related Posts

Leave a Reply

Your email address will not be published. Required fields are marked *