Menu

‘ದಕ್ಷಿಣ ಭಾರತ ಸಮಾಜವಾದಿ’ ಸಮಾವೇಶಕ್ಕೆ ನಾಳೆ ಸಿಎಂ ಚಾಲನೆ

ಬೆಂಗಳೂರಿನಲ್ಲಿ ನಾಳೆ (ಜ.20) ‘ದಕ್ಷಿಣ ಭಾರತ ಸಮಾಜವಾದಿ ಸಮಾವೇಶ’ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.  ಸಮಾಜವಾದಿ ಸಮಾಗಮ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ವತಿಯಿಂದ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ಸಭಾಂಗಣದಲ್ಲಿ ಸಮಾವೇಶ ನಡೆಯಲಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆ ಮೇಲೆ ಮಾಡುತ್ತಿರುವ ದಾಳಿಯನ್ನು ವಿರೋಧಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವ ಯೋಚನೆಯಲ್ಲಿದೆ. ಅದು ಕಾರ್ಯಗತವಾದರೆ ದಕ್ಷಿಣದ ರಾಜ್ಯಗಳಿಗೆ ಬಹಳಷ್ಟು ಹಾನಿಯಾಗಲಿದೆ. ಕೇಂದ್ರ ದಕ್ಷಿಣ ರಾಜ್ಯಗಳಿಗೆ ಕೊಡಬೇಕಾದ ತೆರಿಗೆಯ ಪಾಲನ್ನು ನೀಡದೆ ತಾರತಮ್ಯ ಧೋರಣೆ ಮಾಡುತ್ತಿದೆ. ಈ ಬಗ್ಗೆಯೂ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.

ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಆಶಯ ಭಾಷಣ ಮಾಡಲಿದ್ದು, ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್. ಶಂಕರ್, ಸಾಹಿತಿ ಎಲ್. ಹನುಮಂತಯ್ಯ, ಕಾಂಗ್ರೆಸ್ ಪಕ್ಷದ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಸೌಮ್ಯಾರೆಡ್ಡಿ ಮೊದಲಾದವರು ಭಾಗವಹಿಸಲಿದ್ದಾರೆ.

ತಮಿಳುನಾಡಿನ ಶಾಸಕ ರಾಜೇಶ್ ಕುಮಾರ್, ಕೇರಳದ ಮಾಜಿ ಹಣಕಾಸು ಸಚಿವ ಐಸ್ಯಾಕ್ ಥಾಮಸ್, ತೆಲಂಗಾಣದ ಶಾಸಕ ವಂಶಿಕೃಷ್ಣ, ನೆರೆರಾಜ್ಯಗಳ ಮಾಜಿ ಶಾಸಕರಾದ ವಿಜಯರಾಘವನ್, ಯಾದವ ರೆಡ್ಡಿ, ಪ್ರಾಧ್ಯಾಪಕ ಬಾಬು ಮ್ಯಾಥ್ಯೂ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಹೋರಾಟಗಾರರಾದ ಪ್ರಕಾಶ್‌ ಕಮ್ಮರಡಿ, ರವಿ ವರ್ಮಕುಮಾರ್, ಕೆ.ವಿ. ಭಟ್, ನೂರ್ ಶ್ರೀಧರ್, ಮಂಗ್ಳೂರ ವಿಜಯ ಸೇರಿದಂತೆ ಹಲವರು ವಿಚಾರ ಮಂಡಿಸಲಿದ್ದಾರೆ.

Related Posts

Leave a Reply

Your email address will not be published. Required fields are marked *