ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ ವಂಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಆಗಸ್ಟ್ 17ರಂದು ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಅವರಿಗೆ ಮುಖ್ಯಮಂತ್ರಿ ಶುಭ ಕೋರಿದರು.
ಮಿಸ್ ಯೂನಿವರ್ಸ್ ಕರ್ನಾಟಕ 2025 ಸ್ಪರ್ಧೆ ಕಳೆದ ಮೇನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದು, ಅಸ್ಮಿತಾ ಚೌಧರಿ ಮೊದಲ ರನ್ನರ್ ಅಪ್ ಮತ್ತು ಲೇಖನಾ ಹೆಗ್ಡೆ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಮಿಸ್ ಯೂನಿವರ್ಸ್ ಕರ್ನಾಟಕ 2025 ರ ಸೌಂದರ್ಯ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತದಿಂದ 27 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧಿಗಳು ಮೂರು ಸುತ್ತುಗಳಲ್ಲಿ ತಮ್ಮ ಸೌಂದರ್ಯ, ಆತ್ಮವಿಶ್ವಾಸ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು. ಮೊದಲ ಸುತ್ತಿನಲ್ಲಿ ಎಥ್ನಿಕ್ ವೇರ್, ಎರಡನೇ ಸುತ್ತಿನಲ್ಲಿ ರೆಸಾರ್ಟ್ ವೇರ್ ಮತ್ತು ಅಂತಿಮ ಸುತ್ತಿನಲ್ಲಿ ಈವ್ನಿಂಗ್ ಗೌನ್ ಗಳನ್ನು ಧರಿಸಿ ಗಮನ ಸೆಳೆದಿದ್ದರು.
ವಂಶಿ ಉದಯ್ ಮಿಸ್ ಯೂನಿವರ್ಸ್ ಕರ್ನಾಟಕ 2025 ಕಿರೀಟವನ್ನು ಪಡೆದಿದ್ದು, ಅವರು ಮಿಸ್ ಯೂನಿವರ್ಸ್ ಇಂಡಿಯಾ ನ್ಯಾಷನಲ್ ಪೇಜೆಂಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಮಿಸ್ ಯುನಿವರ್ಸ್ ಕರ್ನಾಟಕ – 2025ರ ಸೌಂದರ್ಯ ಸ್ಫರ್ಧೆಯ ಫಿನಾಲೆಯಲ್ಲಿ ಜೂರಿಗಳಾಗಿ ಮಿಸ್ ಯೂನಿವರ್ಸ್ ಇಂಡಿಯಾ ಟೈಟಲ್ ವಿಜೇತೆ ರಿಯಾ ಸಿಂಘಾ, ನ್ಯಾಷನಲ್ ಡೈರೆಕ್ಟರ್ ನಿಖಿಲ್ ಆನಂದ್, ಮಿಸ್ ಯೂನಿವರ್ಸ್ ಕರ್ನಾಟಕ 2024 ಟೈಟಲ್ ವಿಜೇತೆ ಅವನಿ, ಪೇಜೆಂಟ್ನ ಫ್ರಾಂಚೈಸ್ ಡೈರೆಕ್ಟರ್ ಅಮ್ಜದ್ ಖಾನ್ ಭಾಗವಹಿಸಿದ್ದರು.