Menu

ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯ ಮಸೂದೆ ವಾಪಸ್‌ ಪಡೆಯಿರಿ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾದಿಸುವೆ. ಮಸೂದೆ ವಾಪಸ್‌ ಪಡೆಯಿರಿ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದು ಸಿಎಂ ತಿಳಿಸಿದ್ದಾರೆ.

ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ.ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.

ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆ ಎನ್ನುವುದು ಕೇವಲ ಭಾಷೆ ಅಲ್ಲ, ಅದು ಅವರಿಗೆ ಘನತೆಯ ಬದುಕು ನೀಡುವ ಅಸ್ಮಿತೆಯಾಗಿರುತ್ತದೆ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಸುಲಭದಲ್ಲಿ ವಿಷಯಗಳನ್ನು ಗ್ರಹಿಸುತ್ತಾರೆ ಎನ್ನುವದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅವರ ಮೇಲೆ ಅನ್ಯಭಾಷೆಯನ್ನು ಹೇರುವುದರಿಂದ ಅವರ ಕಲಿಕಾ ಸಾಮರ್ಥ್ಯವನ್ನು ಕುಂದಿಸುವುದು ಮಾತ್ರವಲ್ಲ, ಒಂದು ಸ್ವತಂತ್ರಭಾಷೆಯ ಅವಸಾನಕ್ಕೆ ದಾರಿ ಮಾಡಿಕೊಟ್ಟ ಹಾಗಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಾಸರಗೋಡಿನ ಜನ ಹಲವು ತಲೆಮಾರುಗಳಿಂದ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ, ನಿತ್ಯದ ಬದುಕಿನಲ್ಲಿ ಕನ್ನಡವನ್ನು ನಿರಂತರವಾಗಿ ಬಳಸುತ್ತಾ ಬಂದಿದ್ದಾರೆ. ಕಾಸರಗೋಡು ಜಿಲ್ಲೆಯ ಶೇಕಡಾ 70ರಷ್ಟು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದನ್ನು ಬಯಸುತ್ತಾರೆ ಎಂಬುದು ಅಲ್ಲಿನ ಕನ್ನಡಿಗರ ಒಕ್ಕೊರಲ ಅಭಿಪ್ರಾಯವಾಗಿದೆ. ಯಾವುದೇ ಒಂದು ಭಾಷೆ ಮತ್ತೊಂದು ಭಾಷೆಯ ವಿರುದ್ಧವಾಗಿ ಇರುವುದಿಲ್ಲ. ಭಾರತ ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮದ ತೊಟ್ಟಿಲಾಗಿದೆ. ಈ ಬಹುತ್ವದ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಅಪಾಯಕಾರಿಯಾಗಿದೆ ಎಂದು ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದ್ದಾರೆ.

ಭಾಷೆಯೂ ಸೇರಿದಂತೆ ಅಲ್ಪಸಂಖ್ಯಾತರ ಹಿತರಕ್ಷಣೆಯ ವಿಚಾರದಲ್ಲಿ ನಾವೆಲ್ಲರೂ ಗೌರವಿಸುವ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಸಂವಿಧಾನದ 29 ಮತ್ತು 30ನೇ ಪರಿಚ‍್ಛೇದಗಳು ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವವರಿಗೆ ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿ ರಕ್ಷಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅವರಿಗೆ ತಮ್ಮ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಹಕ್ಕನ್ನೂ ನೀಡುತ್ತದೆ. ಸಂವಿಧಾನದ 350 (ಎ) ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನದ 350(ಬಿ) ಅಲ್ಪಸಂಖ್ಯಾತರ ರಕ್ಷಣೆಯ ಖಾತರಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಅಲ್ಪಸಂಖ್ಯಾತರ ಭಾಷಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಾವು ಕನ್ನಡ ಭಾಷೆಯನ್ನು ಪೊರೆಯುವ ಕೆಲಸ ಮಾಡಿದ ಹಾಗೆ, ಕೇರಳ ರಾಜ್ಯದಲ್ಲಿ ಮಲೆಯಾಳಿ ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಸರ್ವ ಸ್ವಾತಂತ್ರ್ಯ ಅಲ್ಲಿನ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆಯನ್ನು ಹೇರುವ ಪ್ರಯತ್ನ ಸಲ್ಲದು. ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೊಳಿಸಲು ಹೊರಟರೆ ಕನ್ನಡಿಗರು ಇದನ್ನು ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ. ಕಾಸರಗೋಡಿನ ಕನ್ನಡಿಗರ ಜೊತೆಯಲ್ಲಿ ನಿಂತು ಅವರ ಭಾಷಾ ಸ್ವಾತಂತ್ರ್ಯದ ರಕ್ಷಣೆಗೆ ಸರ್ವರೀತಿಯ ಬೆಂಬಲವನ್ನು ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *