ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ “ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನ”ವನ್ನು ಉದ್ಘಾಟಿಸಿ, ಸ್ವಾತಂತ್ರ್ಯ ಸೇನಾನಿಗಳಿಗೆ ನಮಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಇಂದಿನಿಂದ ಆಗಸ್ಟ್ 18ರವರೆಗೆ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ನಡೆಯಲಿದ್ದು, ಇದು 218ನೇ ವರ್ಷದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವಾಗಿದೆ. ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಿಗೆ ಗೌರವ ಸಲ್ಲಿಸುವ ಕೆಲಸ ಆಗಿದೆ. ರಾಣಿ ಚೆನ್ನಮ್ಮಗೆ ಬ್ರಿಟಿಷರ ವಿರುದ್ಧ ಮೊದಲನೇ ಯುದ್ಧಗಳಲ್ಲಿ ಜಯ ಸಿಕ್ಕಿತು, ಎರಡನೇ ಯುದ್ಧದಲ್ಲಿ ಚೆನ್ನಮ್ಮನ ಸೆರೆಯಾಯಿತು. ಚೆನ್ನಮ್ಮನ ಬಲಗೈ ಬಂಟನಾಗಿದ್ದ ರಾಯಣ್ಣನಿಗೆ ಗಲ್ಲು ಶಿಕ್ಷೆ ಆಯಿತು. ರಾಯಣ್ಣ ಹುಟ್ಟಿದ್ದು ಸ್ವಾತಂತ್ರ‍್ಯ ಸಿಕ್ಕ ದಿನವಾದರೆ, ಗಲ್ಲು ಶಿಕ್ಷೆ ಆಗಿದ್ದು ಗಣರಾಜ್ಯದ ದಿನ ಎಂದು ಹೇಳಿದರು.
ಸರ್ಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆಚರಣೆ ಮಾಡಲಾಗುತ್ತದೆ. ಸಂಗೊಳ್ಳಿ ರಾಜಣ್ಣ ಅವರ ಪ್ರಾಧಿಕಾರ ಮಾಡಿದ್ದೇವೆ. ಈ ವೀರರನ್ನ ಸ್ಮರಿಸಬೇಕು. ತೋಟಗಾರಿಕೆ ಇಲಾಖೆಯಿಂದ ಇಂದು ಸ್ವಾತಂತ್ರ‍್ಯ ವೀರರಿಗೆ ಗೌರವ ಸಲ್ಲಿಸಲಾಗಿದೆ. ದೇಶಕ್ಕಾಗಿ ಹೋರಾಡಿದವರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಪುಷ್ಪಮೇಳ ನಡೆಯುತ್ತಿದೆ. ಸ್ವಾತಂತ್ರ‍್ಯ ವೀರರ ಜೀವನ ಚರಿತ್ರೆ ಫಲಪುಷ್ಪಗಳಲ್ಲಿ ಅನಾವರಣಗೊಂಡಿದೆ. ರಾಣಿ ಅಬ್ಬಕ್ಕದೇವಿ, ರಾಣಿ ಚೆನ್ನಭೈರಾದೇವಿ, ರಾಣಿ ಬೆಳವಾಡಿ ಮಲ್ಲಮ್ಮ, ರಾಣಿ ಕೆಳದಿ ಚೆನ್ನಮ್ಮ, ಒನಕೆ ಓಬವ್ವ ಅವರ ಹೂವಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಆ.7ರಿಂದ ಹನ್ನೊಂದು ದಿನಗಳವರೆಗೆ ಫ್ಲವರ್ ಶೋ ನಡೆಯಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ., ಮಕ್ಕಳಿಗೆ 30 ರೂ. ಹಾಗೂ ಶನಿವಾರ, ಭಾನುವಾರ ರಜಾದಿನಗಳಲ್ಲಿ ವಯಸ್ಕರಿಗೆ 100 ರೂ., ಮಕ್ಕಳಿಗೆ 30 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.
ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮಿಗಳು, ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.