Menu

ಇಂದಿರಾನಗರದಲ್ಲಿ ‘ಒರಿಜಿನಲ್‌ ಮೈಲಾರಿ ಹೋಟೆಲ್‌-1938’ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ‘ಒರಿಜಿನಲ್ ವಿನಾಯಕ ಮೈಲಾರಿ-1938’ (Old Original Vinayaka Mylari) ಹೋಟೆಲ್‌ನ ಬೆಂಗಳೂರು ಶಾಖೆಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ  ಚಾಲನೆ ನೀಡಿದರು.

ಇಂದಿರಾನಗರದ 80 ಅಡಿ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಹೋಟೆಲ್ ಉದ್ಘಾಟಿಸಿದ  ಸಿಎಂ ಸಿದ್ದರಾಮಯ್ಯ ಬೆಣ್ಣೆ ಖಾಲಿ ದೋಸೆ ಮತ್ತು ಕಾಶಿ ಹಲ್ವಾ ತಿಂದರು.  ದೋಸೆಯ ರುಚಿಗೆ ತಲೆದೂಗಿದ ಅವರು, ನಾನು ಮೈಸೂರಿನಲ್ಲಿ ಅನೇಕ ಬಾರಿ ಈ ದೋಸೆ ಸವಿದಿದ್ದೇನೆ. ಈಗ ಬೆಂಗಳೂರಿನಲ್ಲೂ ಅದೇ ಅಪ್ಪಟ ರುಚಿ ಸಿಗುತ್ತಿದೆ. ಆಹಾರ ಪ್ರಿಯರು ಇನ್ನುಮುಂದೆ ಮೈಲಾರಿ ದೋಸೆಗಾಗಿ ಮೈಸೂರಿಗೆ ಹೋಗುವ ಅಗತ್ಯವಿಲ್ಲ, ಅದು ಈಗ ನಮ್ಮ ಇಂದಿರಾನಗರದಲ್ಲೇ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಸಿನಿಮಾ ರಂಗದ ಹಲವು ಗಣ್ಯರು ಉಪಸ್ಥಿತರಿದ್ದು, 87 ವರ್ಷಗಳ ಇತಿಹಾಸವಿರುವ ಮೈಲಾರಿ ಪರಂಪರೆ ಬೆಂಗಳೂರಿಗೆ ಕಾಲಿಟ್ಟಿರುವುದಕ್ಕೆ ಶುಭ ಹಾರೈಸಿದರು. ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮತ್ತು ಗೌರಿಗದ್ದೆಯ ಅವಧೂತ ಶ್ರೀ ವಿನಯ್ ಗುರೂಜಿ ಸಾನ್ನಿಧ್ಯ ವಹಿಸಿದ್ದರು.

1938ರಲ್ಲಿ ಗೌರಮ್ಮನವರು ಮೈಸೂರಿನ ನಜರ್‌ಬಾದ್‌ನಲ್ಲಿ ಆರಂಭಿಸಿದ್ದ ಈ ರುಚಿಯ ಪರಂಪರೆಯನ್ನು, ಇದೀಗ ನಾಲ್ಕನೇ ತಲೆಮಾರಿನ ಸಚಿನ್ ಮತ್ತು ಸಿಂಧು ದಂಪತಿ ಬೆಂಗಳೂರಿಗೆ ವಿಸ್ತರಿಸಿದ್ದಾರೆ. ಬಾಳೆ ಎಲೆ ಊಟ ಮತ್ತು ಹಳ್ಳಿ ಸೊಗಡಿನ ದೇಸಿ ರುಚಿಯನ್ನು ಉಳಿಸಿಕೊಂಡು ಹೋಗುವುದು ತಮ್ಮ ಗುರಿ ಎಂದು ಹೋಟೆಲ್ ಮಾಲೀಕರು ತಿಳಿಸಿದರು.

ಡಾ. ರಾಜ್‌ಕುಮಾರ್‌ರಿಂದ ಹಿಡಿದು ಸಚಿನ್ ತೆಂಡೂಲ್ಕರ್‌ವರೆಗೆ ಮತ್ತು ಬಿಬಿಸಿ (BBC) ಪಟ್ಟಿಯಲ್ಲೂ ಸ್ಥಾನ ಪಡೆದಿದ್ದ ಈ ಹೋಟೆಲ್, ಇಂದಿನಿಂದ ಬೆಂಗಳೂರಿಗರ ಸೇವೆಗೆ ಲಭ್ಯವಾಗಿದೆ.

Related Posts

Leave a Reply

Your email address will not be published. Required fields are marked *