Saturday, February 22, 2025
Menu

ಮೆಟ್ರೋ ಟಿಕೆಟ್‌ ದರ ಇಳಿಕೆಗೆ ಬಿಎಂಆರ್‌ಸಿಎಲ್‌ಗೆ ಸಿಎಂ ಆಗ್ರಹ

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

 

ನಮ್ಮ ಮೆಟ್ರೋದಲ್ಲಿ ದರ ಹೆಚ್ಚಳದ ಬಳಿಕ 0-2 ಕಿ. ಮೀ. ಪ್ರಯಾಣಕ್ಕೆ 10 ರೂ. ಮತ್ತು 30 ಕಿ. ಮೀ. ಪ್ರಯಾಣಕ್ಕೆ 90 ರೂ. ಪಾವತಿ ಮಾಡಬೇಕಿದೆ. ಮೆಟ್ರೋ ಟಿಕೆಟ್‌ ದರ ಹೆಚ್ಚಳ ಪ್ರಮಾಣವನ್ನು ವಿರೋಧಿಸಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲೂ ಅಭಿಯಾನ ನಡೆದಿದೆ. ಮೆಟ್ರೊ ಪ್ರಯಾಣ ನೆಚ್ಚಿಕೊಂಡಿದ್ದ ಹಲವರು ಮತ್ತೆ ದ್ವಿಚಕ್ರವಾಹನ, ಬಿಎಂಟಿಸಿ ಬಸ್ಸುಗಳ ಮೊರೆ ಹೋಗುವ ನಿರ್ಧಾರಕ್ಕೂ ಬಂದಿದ್ದಾರೆ.

ಈ ನಡುವೆ ಮಾಜಿ ಸಚಿವ ಡಿವಿ ಸದಾನಂದಗೌಡ ಅವರು ಪ್ರತಿಕ್ರಿಯಿಸಿದ್ದು, ಮೆಟ್ರೋ ದರ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುವುದನ್ನು ಬಿಡಿ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮುಖಂಡರಾದ ಆರ್‌. ಅಶೋಕ್‌ , ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಕೂಡ ರಾಜ್ಯ ಸರ್ಕಾರವೇ ಇದಕ್ಕೆ ಹೊಣೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Related Posts

Leave a Reply

Your email address will not be published. Required fields are marked *