ಕಲಬುರಗಿ ವಿಮಾನ ನಿಲ್ದಾಣಲ್ಲೇ ಪ್ರಾಥಮಿಕ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಅಧಿಕಾರಿಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರವಾಹ ಹಾನಿ ವಿವರಗಳನ್ನು ಪಡೆದುಕೊಂಡರು.
ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲಾ ಅಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿದ್ದು ವಿವರಗಳನ್ನು ನೀಡಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾದ ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಜೊತೆಯಲ್ಲಿ ಮೊದಲ ಸುತ್ತಿನ ವೈಮಾನಿಕ ಸಮೀಕ್ಷೆಗೆ ತೆರಳಿದರು. ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿನ ಬೆಳೆ ಹಾನಿ ಕುರಿತು ಎರಡನೇ ಸುತ್ತಿನ ವೈಮಾನಿಕ ಸಮೀಕ್ಷೆ ಕೈಗೊಂಡರು.
ಮಳೆ ಹಾನಿ ಸಮೀಕ್ಷೆ ನಡೆಸಿದ ಸಿಎಂ ಹಾಗೂ ತಂಡ ಹಾನಿಯ ಗಂಭೀರತೆ ಮತ್ತು ಪರಿಹಾರದ ಅಗತ್ಯಗಳನ್ನು ನೇರವಾಗಿ ಪರಿಶೀಲಿಸಿತು. ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಮಳೆಯಿಂದ ಬೆಳೆ ಹಾನಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ತುರ್ತು ಪರಿಹಾರ ನೀಡುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಳ್ಳೆಯ ಸುದ್ದಿ ನೀಡಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರಕೃತಿ ನಮ್ಮ ನಿಯಂತ್ರಣದಲ್ಲಿ ಇಲ್ಲ. ಪ್ರಕೃತಿ ವಿಕೋಪದಿಂದ ಉಂಟಾಗುತ್ತಿರುವ ನಷ್ಟದ ಕುರಿತು ನಾವು ತಕ್ಷಣ ಚರ್ಚಿಸಬೇಕು. 1–2 ಲಕ್ಷ ಹಕ್ಟೇರ್ ಬೆಳೆ ಹಾನಿಯಾಗಿದೆ. ಜಮೀನಿನಲ್ಲಿ ನೀರು ಇರುವುದರಿಂದ ಸಮೀಕ್ಷೆಗೆ ತೊಂದರೆಯಾಗಿದೆ. ತ್ವರಿತವಾಗಿ ಸಮೀಕ್ಷೆ ಮಾಡಿ, ರೈತರಿಗೆ ಪರಿಹಾರ ನೀಡಲಾಗುವುದು. ಈ ಭಾಗದಲ್ಲಿ 9 ಲಕ್ಷ ಹಕ್ಟೇರ್ ಭೂಮಿ ಮೇಲೆ ಬೆಳೆ ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದರು. ತುರ್ತು ಪರಿಹಾರ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ನಿಯಮಾವಳಿಗಳ ಪ್ರಕಾರ ನೀಡಲಾಗುವುದು ಎಂದರು.
ಬಿ.ವೈ. ವಿಜಯೇಂದ್ರ ಅವರ ಅಪ್ಪಾಜಿ ಮುಖ್ಯಮಂತ್ರಿಯಾಗಿದ್ದಾಗ ಕಲಬುರಗಿಗೆ ಬಂದು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡದೆ ವಿಮಾನ ನಿಲ್ದಾಣದಿಂದ ವಾಪಸ್ ಹೋದದ್ದು ನೆನಪಿಲ್ಲವೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಜನರ ಕಷ್ಟ ನೋಡುವುದು ನಾಯಕನ ಧರ್ಮ. ಹಿಂದೆ ಯಡಿಯೂರಪ್ಪ ಅವರು ಕಲಬುರಗಿಗೆ ಬಂದಾಗ ಸಮೀಕ್ಷೇನೂ ಮಾಡಿಲ್ಲ. ಅಧಿಕಾರಿಗಳ ಜತೆಗೆ ಸಭೆ ಕೂಡ ನಡೆಸದೆ ವಾಪಸ್ಸಾಗಿದ್ದರು. ಬಿಜೆಪಿ ಅವರಿಂದ ನಾವು ಪಾಠ ಕಲಿಯಬೇಕಿಲ್ಲ, ನಮ್ಮ ಎಲ್ಲ ಶಾಸಕರು ಕೇಂದ್ರ ಸ್ಥಾನದಲ್ಲೇ ಇದ್ದು, ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಿಮ್ಮ ಅಪ್ಪಾಜಿ ಪರಿಹಾರ ನೀಡಲು ನೋಟ್ ಪ್ರಿಂಟ್ ಮಷಿನ್ ಇಲ್ಲ ಎಂದಿದ್ದರು. ಮಳೆಹಾನಿ ಕುರಿತು ರಾಜ್ಯದಷ್ಟೇ ಕೇಂದ್ರ ಸರಕಾರದ ಜವಾಬ್ದಾರಿ ಇದೆ. ಎನ್.ಡಿ.ಆರ್.ಎಫ್ ನಿಯಮದಡಿ ಪರಿಹಾರ ನೀಡಲಿ ಎಂದು ಹೇಳಿದ್ದಾರೆ.