ಬೆಂಗಳೂರು: ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತಾಕಬೇಕು: ದೇಶದ ಸಾರ್ವಭೌಮತೆ ಧಕ್ಕೆ ಬಂದಾಗ ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ: ಇದನ್ನು ಪ್ರತೀ ಸಂದರ್ಭದಲ್ಲೂ ಭಾರತ ಸಾಬೀತು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.
ದೇವನಹಳ್ಳಿಯಲ್ಲಿ ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಎರಡು ವರ್ಷ ಸರ್ಕಾರದ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವನ್ನು ಕೆಣಕಿದರೆ ಅದು ಪಾಕಿಸ್ತಾನವೇ ಆಗಲಿ, ಯಾವುದೇ ದೇಶವಾಗಲಿ ನಾವು ಸಹಿಸಲ್ಲ. ಯಾವುದೇ ಹಂತದ ಯುದ್ಧಕ್ಕೆ ಭಾರತ ಸದಾ ಸಿದ್ಧ, ಸದಾ ಸನ್ನದ್ಧ ಆಗಿರುತ್ತದೆ. ಅನಿವಾರ್ಯತೆ ಆದಾಗ ಯುದ್ಧಕ್ಕೆ ಮುಂದಡಿ ಇಟ್ಟು ನಮ್ಮ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ನಮಗೆ ಗೊತ್ತಿದೆ. ಇದನ್ನು ಭಾರತ ಪ್ರತೀ ಸಂದರ್ಭದಲ್ಲೂ ಸಾಭೀತು ಪಡಿಸಿದೆ. ಇತಿಗಾಸದುದ್ದಕ್ಕೂ ನಾವು ಈ ಎಚ್ಚರವನ್ನು ಮತ್ತು ಸಾರ್ವಭೌಮತೆಯನ್ನು ಕಾಪಾಡಿಕೊಂಡೇ ಬಂದಿದ್ದೇವೆ. ಮುಂದಕ್ಕೂ ಇದನ್ನು ಕಾಪಾಡಿಕೊಳ್ಳುತ್ತೇವೆ ಎಂದರು.
ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವುದು, ಪ್ರತಿಯೊಬ್ಬ ಭಾರತೀಯರಿಗೆ ಸೂಕ್ತ ರಕ್ಷಣೆ ಕೊಡುವುದು ನಮ್ಮ ಈ ಕ್ಷಣದ ಆದ್ಯತೆಯಾಗಿದೆ. ಇದರಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ಭಾರತ ಬುದ್ದ, ಬಸವರ, ಗಾಂಧಿ, ಅಂಬೇಡ್ಕರ್ ಅವರ ನಾಡು. ಇಲ್ಲಿ ಭಯೋತ್ಪಾದನೆಗೆ, ಅಶಾಂತಿಗೆ ಅವಕಾಶ ಇಲ್ಲ. ಅನಿವಾರ್ಯವಾದರೆ ಯುದ್ಧಕ್ಕೂ ಸಿದ್ದ ಎನ್ನುವ ಮಾತನ್ನು ನಿನ್ನೆ ನಾನು ಹೇಳಿದ್ದೆ. ಆದರೆ ಭಯೋತ್ಪಾದಕರ ವಿರುದ್ಧ, ಪಾಕಿಸ್ತಾನದ ವಿರುದ್ಧ ಯುದ್ಧವೇ ಬೇಡ ಎಂದು ಹೇಳಿದ್ದೇನೆ ಎಂದು ಸುಳ್ಳು ಸುಳ್ಳೇ ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ ನನ್ನ ಮಾತನ್ನು ತಿರುಚಿ ಯುದ್ದವೇ ಬೇಡ ಎಂದು ಹೇಳಿದ್ದೇನೆ ಎಂದು ನನ್ನದಲ್ಲದ ಅಭಿಪ್ರಾಯವನ್ನು ತಿರುಚಿ ತೋರಿಸುತ್ತಿದ್ದಾರೆ. ಇದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.