ಮರ್ಯಾದೆ ಹತ್ಯೆ ತಡೆಯಲು ಕಾಯ್ದೆಯನ್ನು ರೂಪಿಸಿ ಜಾರಿ ಮಾಡಬೇಕೆಂಬ ಮನವಿಯನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕನ್ನಡ ಚಳುವಳಿಗಾರರ ಸಮಿತಿ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ಜನರಾಜ್ಯೋತ್ಸವ -2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅವರು, ಅನ್ಯಜಾತಿಯ ಯುವಕನನ್ನು ವಿವಾಹ ಆಗಿದ್ದ ಸಿಟ್ಟಿಗೆ ತಂದೆ ಗರ್ಭಿಣಿ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಎಂದು ಸಿಎಂ ಗಮನಕ್ಕೆ ತಂದು ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದರು. ಆ ಒತ್ತಾಯ ಪತ್ರವನ್ನು ಚಿಂತಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಶಿಕ್ಷಣ ತಜ್ಞರು, ವಕೀಲರು ಬೆಂಬಲಿಸಿದ್ದಾರೆ.
ಹುಬ್ಬಳ್ಳಿ ಸೇರಿ ಇತರೆಡೆ ನಡೆದ ಮರ್ಯಾದಾ ಹತ್ಯೆ ಕುರಿತ ವಿಚಾರ ಗಮನದಲ್ಲಿದ್ದು, ತಡೆಗೆ ಕಾನೂನು ಜಾರಿಗೊಳಿಸಲು ಒತ್ತಾಯವಿದೆ. ಕಾನೂನು ತಂದರೆ ಸಾಲದು, ಜಾರಿ ಕೆಲಸ ಗಂಭೀರವಾಗಿ ಆಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿದೆ ಎಂದು ಸಿಎಂ ಹೇಳಿದರು.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ತಂದೆಯಿಂದ ಹತ್ಯೆಯಾದ ಗರ್ಭಿಣಿ ಮಾನ್ಯ ಪಾಟೀಲ್ ಮತ್ತು ಮದುವೆಯಾದ ಹುಡುಗ ವಿವೇಕಾನಂದ ಒಂದೇ ಗ್ರಾಮದವರು, ಆದರೆ ಆತ ದಲಿತ, ಮಾನ್ಯ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಕೃತ್ಯ ಖಂಡಿಸಿ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಇಂಥ ಕೃತ್ಯಗಳನ್ನು ತಡೆಯಲು ವಿಶೇಷವಾದ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿವೆ.


