ಯಡ್ರಾಮಿಯಲ್ಲಿ ಪ್ರಜಾ ಸೌಧಕ್ಕೆ ಅಡಿಗಲ್ಲು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಲೋಕಾರ್ಪಣೆ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಪಟ್ಟಣಕ್ಕೆಭೇಟಿ ನೀಡಲಿದ್ದು,ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದ್ದಾರೆ.
ಪಟ್ಟಣದ ಮಹಿಬೂಬ್ ಸುಭಾನಿ ದರ್ಗಾ ಹತ್ತಿರ ಹೆಲಿಪ್ಯಾಡ್ ವೀಕ್ಷಣೆ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ನೂತನ ತಾಲೂಕುಗಳ ಪ್ರಜಾಸೌಧ ನಿರ್ಮಾಣದ ಅಡಿಗಲ್ಲು ಸಮಾರಂಭ ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು.
ಕೆಪಿಎಸ್ ಆವರಣದಲ್ಲಿ ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಸಚಿವರು, ಶಾಸಕರು ಭಾಗವಹಿಸಲಿ ದ್ದಾರೆ. ಈ ಕಾರ್ಯಕ್ರಮದೊಂದಿಗೆ ತಾಲೂಕಿನ ಅಭಿವೃದ್ಧಿಗೆ ವೇಗ ದೊರೆಯಲಿದೆ. 15-20 ಸಾವಿರ ಜನರು ಭಾಗವಹಿಸಲಿದ್ದು, ಹಳ್ಳಿಗಳಿಂದ ಆಗಮಿಸುವ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಸ್ಥಳ ಪರಿಶೀಲಿಸಿ ಯಾವುದೇ ಲೋಪದೋಷ ಆಗದಂತೆ ನೋಡಿಕೊಳ್ಳಬೇಕು ಎಂದು ಸಹಾಯಕ ಆಯುಕ್ತ ಸಾಹಿತ್ಯ ಆಲದಕಟ್ಟಿ, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ, ಪ್ರಮುಖರಾದ ಚಂದ್ರಶೇಖರ ಪುರಾಣಿಕ, ಇಬ್ರಾಹಿಂಸಾಬ್ ಉಸ್ತಾದ್, ತಿಪ್ಪಣ್ಣ ಸಾಹು ಹೆಬ್ಬಾಳ, ಹಯ್ಯಾಳಪ್ಪ ಗಂಗಾಕರ, ಬಸವರಾಜ ಪವಾರ್, ನಾಗಣ್ಣ ಹಾಗರಗುಂಡಗಿ, ರಜಾಕ್ ಮನಿಯಾರ್, ವೀರೇಶಗೌಡ ಕೆ., ಮಹೇಂದ್ರ ಬಾಲೂರ, ಸುರೇಶ ಡಂಬಳ, ನದೀಮ್ ಮಳ್ಳಿಕರ್, ಸಿದ್ದು ಸಾಹು ಗುರಶೆಟ್ಟಿ, ಗುರಣ್ಣ ದೊಡ್ಡನಿ ಕಾಚಾಪುರ, ಆದಾಮ್ ಭಾಗವಾನ್ ಇತರರಿದ್ದರು.
ಯಡ್ರಾಮಿಗೆ ಸಿಎಂ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆಯಲ್ಲಿ ಪ್ರತಿ ಸೋಮವಾರ ಪೊಲೀಸ್ ಠಾಣೆ ಎದುರು ನಡೆಯುವ ವಾರದ ಸಂತೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಕಾರ್ಯಕ್ರಮಕ್ಕೆ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಯಾಗಲಿದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಸಂತೆಯನ್ನು ಸುಂಬಡ ಮುಖ್ಯ ರಸ್ತೆಯಲ್ಲಿರುವ ಎಪಿಎಂಸಿ ಆವರಣಕ್ಕೆ ಅಂದಿನ ಮಟ್ಟಿಗೆ ಸ್ಥಳಾಂತರಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಮ್ ಬಜಂತ್ರಿ ತಿಳಿಸಿದ್ದಾರೆ.


