ಬೆಂಗಳೂರು: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರೇ ಮಾಲೀಕರು. ಕ್ಷೇತ್ರಗಳ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಹಾಗೂ ಶಾಸಕರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೆ.ಆರ್. ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೆ.ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ 404 ಕೋಟಿ ರೂ.ಗಳ ಶಂಕುಸ್ಥಾಪನೆ , 109 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಸೇರಿ ಒಟ್ಟು 513 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಉದ್ಗಾಟನೆ ಮತ್ತು ಶಂಕುಸ್ಥಾಪನೆ ನೆರವೇರಿದ್ದು, ಇದಕ್ಕೆ ಸ್ಥಳೀಯ ಶಾಸಕರಾದ ರವಿಶಂಕರ್ ಕಾರಣ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಸಣ್ಣ ನೀರಾವರಿ ಸಚಿವರು 197 ಕೋಟಿ ರೂ.ಗಳ ವೆಚ್ಚದ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ತಮ್ಮ ಇಲಾಖೆಯೊಂದರಲ್ಲಿಯೇ ಮಾಡಿದ್ದಾರೆ. ಆರೋಗ್ಯ ಇಲಾಖೆಯಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ನೆರವೇರಿದೆ ಎಂದರು.
ಪಾಪರ್ ಸರ್ಕಾರವಾಗಿದ್ದರೆ 513 ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿತ್ತೇ?
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಈ ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸುತ್ತಾರೆ. ಪಾಪರ್ ಸರ್ಕಾರವಾಗಿದ್ದರೆ 513 ಕೋಟಿ ರೂ.ಗಳ ಕಾಮಗಾರಿಗಳನ್ನು ಇಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಆದರೆ ಟೀಕೆ ಮಾಡುವುದನ್ನು ಹಾಗೂ ಸುಳ್ಳು ಹೇಳುವುದನ್ನು ಮಾತ್ರ ಬಿಡುವುದಿಲ್ಲ. ಬಿಜೆಪಿ ಜೆಡಿಎಸ್ ಪಕ್ಷಗಳು ಹೇಳಿಕೊಂಡಿರುವ ಚಾರ್ಜ್ ಶೀಟ್ ನಲ್ಲಿ ಬರೀ ಸುಳ್ಳುಗಳನ್ನೇ ಹೇಳಿದ್ದಾರೆ. ಹೀಗೆ ಅವರಿಗೆ ಸುಳ್ಳು ಹೇಳಲು ನಾಚಿಕೆಯಾಗುವುದಿಲ್ಲವೇ ಎಂದರು.
ಆರ್.ಅಶೋಕ್, ಹೆಚ್. ಡಿ. ಕುಮಾರ್ ಸ್ವಾಮಿ, ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಇವರೆಲ್ಲರೂ ಬಹಳ ವರ್ಷಗಳಿಂದ ರಾಜಕೀಯದಲ್ಲಿದ್ದು, ಸುಳ್ಳು ಹೇಳುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿ ಮಾಡಿದೆ. ಜನರು ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳುತ್ತಿರುವಾಗ ಸುಳ್ಳು ಎಂದು ಹೇಗೆ ಹೇಳುತ್ತಾರೆ ಎಂದರು. ರಾಜ್ಯದ 3.50 ಕೋಟಿ ಮಹಿಳೆಯರು ಯಾವುದೇ ಬೇಧ ಭಾವವಿಲ್ಲದೇ ಶಕ್ತಿ ಯೋಜನೆಯನ್ನು ಬಳಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇಂಥ ಯೋಜನೆಯನ್ನು ಜಾರಿ ಮಾಡಿತ್ತೇ? ಎಂದು ಪ್ರಶ್ನಿಸಿದ ಸಿಎಂ ಈವರೆಗೆ 500 ಕೋಟಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಪ್ರತಿ ದಿನ 50-60 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಜಿಎಸ್ ಟಿ ಸಂಗ್ರಹಣೆಯಲ್ಲಿ ಕರ್ನಾಟಕ 2ನೇ ಸ್ಥಾನ
ಜಿಎಸ್ ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮುಂದಿನ ವರ್ಷ ನಾವು ಮೊದಲ ಸ್ಥಾನಕ್ಕೆ ಬರುವ ಪ್ರಯತ್ನ ಮಾಡುತ್ತೇವೆ ಎಂದ ಮುಖ್ಯಮಂತ್ರಿಗಳು, ಕಬಿನಿ ಸೇತುವೆಗೆ 25 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ . ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಸಾಗರಕಟ್ಟೆ ಸೇತುವೆ, ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕೆಂಬುದು ಸರ್ಕಾರದ ಆಶಯ ಎಂದರು.
ಜನಾಕ್ರೋಶ ಕಾರ್ಯಕ್ರಮ ಮೂಲಕ ಬಿಜೆಪಿ ಸುಳ್ಳು ಪ್ರಚಾರ
ಶಕ್ತಿ ಯೋಜನೆಯಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ಪ್ರಶಂಸಿಸಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದಿದ್ದರು. ಗ್ಯಾರಂಟಿ ಯೋಜನೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಸರ್ಕಾರದ ಎರಡು ವರ್ಷದ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಸುಮಾರು 3 ರಿಂದ 4 ಲಕ್ಷ ಜನ ಆಗಮಿಸಿದ್ದರು. ಆದರೆ ಬಿಜೆಪಿಯವರು ಜನಾಕ್ರೋಶ ಕಾರ್ಯಕ್ರಮ ಮಾಡಿ, ಅಭಿವೃದ್ಧಿ ನಡೆಯುತ್ತಿಲ್ಲ, ಬೆಲೆ ಏರಿಕೆಯಾಗಿದೆ ಎಂಬ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಯಾವ ಕೆಲಸವನ್ನೂ ಮಾಡದೇ, ಕಾಂಗ್ರೆಸ್ ಸರ್ಕಾರದ ಯಶಸ್ಸಿಗೆ ಮರುಗುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಶಕ್ತಿ ಯೋಜನೆ , ನಂತರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತರಲಾಯಿತು. ತದನಂತರ ಜನವರಿ 2024 ರಲ್ಲಿ ಯುವನಿಧಿಯನ್ನು ಜಾರಿಗೊಳಿಸಲಾಗಿದ್ದು, ಇದಕ್ಕಾಗಿ 52000 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದರು.
ಬಿಜೆಪಿ ಅವಧಿಯಲ್ಲಿ ಹಣದ ಲೂಟಿ ನಡೆದಿದೆ
ಹಿಂದೆ ನಮ್ಮ ಸರ್ಕಾರ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಸ್ತುತ ನಮ್ಮ ಸರ್ಕಾರ 593 ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಿದ್ದು, 242 ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರ ಇನ್ನುಳಿದ ವರ್ಷಗಳಲ್ಲಿ ಉಳಿದ ಎಲ್ಲ ಭರವಸೆಗಳನ್ನೂ ಈಡೇರಿಸಲಿದೆ. ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಹಣ ಲೂಟಿ ಹೊಡೆದರು. 270000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಹಣವಿಲ್ಲದೇ ಮಂಜೂರಾತಿ ನೀಡಿದರು. ಬಿಜೆಪಿಯ ಬಸವರಾಜ ಬೊಮ್ಮಾಯಿಯವರು ತಮ್ಮ ಅವಧಿಯಲ್ಲಿ 166000 ಕೋಟಿ ರೂ. ಯೋಜನೆಗಳಿಗೆ ಹಣವಿಲ್ಲದೇ ಮಂಜೂರು ಮಾಡಿದ ಫಲವಾಗಿ , ನಮ್ಮ ಸರ್ಕಾರದ ಬಾಕಿ ಮೊತ್ತವನ್ನು ಪಾವತಿಸುತ್ತಿದೆ ಎಂದರು.
ಕೇಂದ್ರದ ಬೆಲೆಏರಿಕೆ ಬಗ್ಗೆ ಬಿಜೆಪಿ ಮಾತನಾಡುವುದಿಲ್ಲ
ಕೆ.ಆರ್.ನಗರದ ಶಾಸಕರು ಪ್ರಾಮಾಣಿಕರಾಗಿದ್ದು, ಕ್ಷೇತ್ರದ ಒಳಿತಿಗೆ ಶ್ರಮಿಸುತ್ತಿದ್ದಾರೆ. ಅವರನ್ನು ಮುಂದಿನ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಜನರಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿದರು. ಹಾಲಿನ ದರ ಏರಿಕೆಯಾಗಿದ್ದು, ಹೆಚ್ಚಿನ ಮೊತ್ತ ರೈತರಿಗೆ ತಲುಪುತ್ತಿದೆಯೇ ಹೊರತು, ಸರ್ಕಾರದ ಬೊಕ್ಕಸಕ್ಕೆ ಬರುತ್ತಿಲ್ಲ. ನೆರೆರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಹಾಲಿನ ದರ ಕಡಿಮೆಯಿದೆ. ಬಿಜೆಪಿಯವರು ಕೇಂದ್ರದಲ್ಲಿ ಹೆಚ್ಚಿಸಿರುವ ದರಗಳ ಬಗ್ಗೆ ಮಾತನಾಡುವುದಿಲ್ಲ. ಡೀಸೆಲ್ ಬೆಲೆ ಹಿಂದೆ ಇದ್ದ 46 ರೂ. ಇದ್ದ ಬೆಲೆ , ಈಗ 91 ರೂ.ಗಳಿಗೆ ಹೆಚ್ಚಳವಾಗಿದೆ ಎಂದರು.
ಉಸ್ತುವಾರಿ ಸಚಿವ ಡಾ: ಹೆಚ್.ಸಿ ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್, ದಿನೇಶ್ ಗುಂಡೂರಾವ್, ಬೋಸರಾಜು, ಬೈರತಿ ಸುರೇಶ್, ಶಾಸಕರಾದ ರವಿಶಂಕರ್, ವಿಧಾನ ಪರಿಷತ್ ಸದಸ್ಯ ಡಾ: ತಿಮ್ಮಯ್ಯ, ಕೆ.ಆರ್.ನಗರ ಪುರಸಭೆ ಅಧ್ಯಕ್ಷ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.