ಬೆಂಗಳೂರು: ಅನುದಾನ ಕೊರತೆಯಿಂದ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 50 ಕೋಟಿ ರೂ. ಬಿಡುಗಡೆಗೆ ಹಸಿರು ನಿಶಾನೆ ನೀಡಿದ್ದಾರೆ. ಈ ಮೂಲಕ ಪಕ್ಷದೊಳಗಿನ ಅಸಮಾಧಾನ ಶಮನಗೊಳಿಸಲು ಪ್ರಯತ್ನಿಸಿದ್ದಾರೆ.
ಅನುದಾನ ಸಿಕ್ತಿಲ್ಲ ಅಂತ ಬಹಿರಂಗವಾಗಿ ಶಾಸಕರು ಅಸಮಾಧಾನ ಹೊರಹಾಕಿದ್ದರು. ಶಾಸಕರ ಅಸಮಾಧಾನಕ್ಕೆ ಖುದ್ದು ಉಸ್ತುವಾರಿ ಸುರ್ಜೇವಾಲಾ ಅವರೇ ಬಂದು ಶಾಸಕರ ಅಹವಾಲು ಕೇಳಿದ್ದರು. ಶಾಸಕರ ಜೊತೆ ಸುರ್ಜೇವಾಲಾ ಸಭೆ ಮಾಡಿದ ಬೆನ್ನಲ್ಲೇ ಸಿಎಂ ಅನುದಾನ ಬಿಡುಗಡೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ (Congress) ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನ ಬಿಡುಗಡೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ ಅಡಿ 37.50 ಕೋಟಿ ರೂ., ಶಾಸಕರ ವಿವೇಚನಾಧಿಕಾರದ ಅಡಿ ಹಾಗೂ ಇತರೆ ಇಲಾಖೆ ಕಾಮಗಾರಿಗೆ 12.50 ಕೋಟಿ ರೂ. ಅನುದಾನ ಬಿಡುಗಡೆ ಮಾಡೋ ಬಗ್ಗೆ ಸಿಎಂ ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದಾರೆ.
ಅನುದಾನ ಬಿಡುಗಡೆಗೂ ಮುನ್ನ ಸಿಎಂ ಕಾಂಗ್ರೆಸ್ ಶಾಸಕರ ಜೊತೆ ಒನ್ ಟು ಒನ್ ಸಭೆ ನಡೆಸಲಿದ್ದಾರೆ. ಜುಲೈ 30 ಮತ್ತು 31ರಂದು ಸಿಎಂ ಶಾಸಕರ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಗೆ ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರಗಳನ್ನು ನೀಡುವಂತೆ ಸಿಎಂ ತಿಳಿಸಿದ್ದಾರೆ. ಶಾಸಕರ ಜೊತೆ ಸಭೆ ಬಳಿಕ ಅನುದಾನ ಬಿಡುಗಡೆ ಆಗುವ ಸಾಧ್ಯತೆ ಇದೆ.