Tuesday, December 30, 2025
Menu

ಕೋಗಿಲು ಬಡಾವಣೆ ಅಕ್ರಮ ಮನೆಗಳ ತೆರವು, ಸಿಎಂ, ಡಿಸಿಎಂ ಯೂ ಟರ್ನ್: ವಿಜಯೇಂದ್ರ

vijayenrda

ಬೆಳಗಾವಿ: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ವಿಚಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಇದೀಗ ಯೂಟರ್ನ್ ಹೊಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಮಾಧ್ಯಮ ಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ನೀತಿಯಿಂದ ರಾಜ್ಯದ ಜನರು ದಂಗೆ ಏಳುವಂಥ ಸ್ಥಿತಿ ಇದೆ. ಜನವರಿ 5ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ಡ್ರಗ್ ಮಾಫಿಯ, ಕನ್ನಡಿಗರಿಗೆ ಅಪಮಾನ, ಗೃಹಲಕ್ಷ್ಮಿ ಯೋಜನೆಯ ಅಕ್ರಮದ ಕುರಿತು ಸಮಗ್ರವಾಗಿ ಚರ್ಚಿಸಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುವ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲಿದ್ದೇವೆ ಎಂದು ಪ್ರಕಟಿಸಿದರು.

ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯ ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿಯ ಮನೆಗಳನ್ನು ಕೊಡುವುದಾಗಿ ನಿರ್ಧರಿಸಿದ್ದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನಮ್ಮ ರಾಜ್ಯದ ನೀತಿ ನಿರ್ಧಾರಗಳನ್ನು ದೆಹಲಿಯಲ್ಲಿ ಕುಳಿತ ಕೇರಳ ಮೂಲದ ಕೆ.ಸಿ.ವೇಣುಗೋಪಾಲ್ ತೀರ್ಮಾನಿಸಬೇಕೇ? ಈ ರಾಜ್ಯದ ಮುಖ್ಯಮಂತ್ರಿಗಳು ನಿರ್ಧರಿಸಬೇಕೇ? ಬೈಯಪ್ಪನಹಳ್ಳಿಯ ಮನೆಗಳನ್ನು ಕನ್ನಡಿಗರಿಗೆ, ಬಡವರಿಗೆ ಕೊಡಲು ಕಟ್ಟಲಾಗಿದೆ. ಹೈಕಮಾಂಡಿಗೆ ಬೆದರಿ, ಕುರ್ಚಿ ಉಳಿಸಿಕೊಳ್ಳಲು ಮನಸೋಇಚ್ಛೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಸಿಎಂ ನಿರ್ಧಾರಕ್ಕೆ ಕಾನೂನಿನಡಿ ಅಧಿಕಾರ ಇದೆಯೇ? ಎಂದು ಕೇಳಿದರು.

ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ವಲಸಿಗರಿಗೆ ಅಕ್ರಮವಾಗಿ ಮನೆ ಕೊಡುವುದಾಗಿ ಘೋಷಿಸಿದ್ದು ಖಂಡಿತಕ್ಕೂ ಕಾನೂನಿನ ವಿರುದ್ಧವಾದುದು. ಸಿಎಂ, ಡಿಸಿಎಂ ನಿರ್ಧಾರವೇ ಅಕ್ರಮ. ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ಆಗುವಂತೆ ಯಾಕೆ ಇಂಥ ನಿರ್ಧಾರ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು. ರಾಜ್ಯದ ತೆರಿಗೆದಾರರ ಹಣದಿಂದ ಕಟ್ಟಿದ ಮನೆಗಳನ್ನು ನೀವು ಖುಷಿ ಬಂದಂತೆ ತೀರ್ಮಾನ ಮಾಡುವುದು ಸರಿಯೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು.

ಕೇರಳದ ಮುಖ್ಯಮಂತ್ರಿ ಪಿಣರಾಯಿಯವರ ಹೇಳಿಕೆ, ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿದ ಬಳಿಕ ಹೀಗಾಗಿದೆ. ಸಿಎಂ ಅವರು ತಮ್ಮ ಕುರ್ಚಿ ಉಳಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೆ, ಉಪ ಮುಖ್ಯಮಂತ್ರಿಗಳು ಸಿಎಂ ಕುರ್ಚಿ ಪಡೆದುಕೊಳ್ಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ವಿಶ್ಲೇಷಿಸಿದರು.

ನಮ್ಮ ರಾಜ್ಯದ ಬಡವರೇನು ಅನ್ಯಾಯ ಮಾಡಿದ್ದಾರೆ?

ಹಿಂದೆ ಕೇರಳದ ವಯನಾಡಿನಲ್ಲಿ ಭೀಕರ ಪ್ರವಾಹ ಆದಾಗ 100 ಮನೆಗಳನ್ನು ಕಟ್ಟಿಸಿಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದರು. ವಯನಾಡಿನ ಆನೆ ತುಳಿತ ಸಾವಿಗೆ ತಕ್ಷಣ 15 ಲಕ್ಷ ಪರಿಹಾರ ನೀಡಿದ್ದರು. ಕೇರಳದಲ್ಲಿ ಮನೆ ಕಟ್ಟಿಸಿಕೊಡುವ, ಪರಿಹಾರ ಕೊಡುವ ನಿಮಗೆ ನಮ್ಮ ರಾಜ್ಯದ ಬಡವರೇನು ಅನ್ಯಾಯ ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ಕೇಳಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದರು. ಮುಖ್ಯಮಂತ್ರಿಗಳಿಂದ ಪರಿಹಾರ ನಿರೀಕ್ಷೆಯಲ್ಲಿದ್ದರು. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಮುಖ್ಯಮಂತ್ರಿಗಳು ಕೇಂದ್ರದ ಕಡೆ ಬೊಟ್ಟು ಮಾಡಿ ಕುಳಿತಿದ್ದರಲ್ಲವೇ ಎಂದು ಕೇಳಿದರು.

ಬಡವರಿಗೆ ಎಷ್ಟು ಮನೆ ಕೊಟ್ಟಿದ್ದೀರಿ?

ಸಿಎಂ ಕುರ್ಚಿ ಉಳಿಸಿಕೊಳ್ಳುವ ಯತ್ನ ಮತ್ತು ಪಡೆಯುವ ಯತ್ನ ಈ ರಾಜ್ಯಕ್ಕೆ, ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು. 2013-18ರ ಅವಧಿಯಲ್ಲಿ 14.5 ಲಕ್ಷ ಮನೆಗಳನ್ನು ನಿರ್ಮಿಸಿದೆ. ಬಳಿಕ ಬಿಜೆಪಿ ಸರಕಾರ ಇದ್ದಾಗ ಕೇವಲ 5.19 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದೆ. ಮಾರ್ಚ್ 2023ಕ್ಕೆ ಬಾಕಿ ಉಳಿದ 12 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಪೂರ್ಣಗೊಳಿಸಲು 17,815 ಕೋಟಿ ರೂ. ಬೇಕಿದೆ. 3 ಲಕ್ಷ ಮನೆಗಳನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಇದಕ್ಕೆ 2450 ಕೋಟಿ ರೂ. ಮೀಸಲಿಡುವುದಾಗಿ ಮುಖ್ಯಮಂತ್ರಿಗಳು 2023ರಲ್ಲಿ ಬಜೆಟ್ ಭಾಷಣದಲ್ಲಿ ಹೇಳಿದ್ದರು ಎಂದು ಗಮನ ಸೆಳೆದರು. ಸರಕಾರ ಬಂದು ಎರಡೂವರೆ ವರ್ಷ ಆಯಿತಲ್ಲವೇ? ಮುಖ್ಯಮಂತ್ರಿಗಳೇ, ಈ ಅವಧಿಯಲ್ಲಿ ಬಡವರಿಗೆ ಎಷ್ಟು ಮನೆ ಕಟ್ಟಿಸಿ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಕನ್ನಡಿಗರ ಹೊಟ್ಟೆ ಮೇಲೆ ಹೊಡೆಯುವ ಕೆಲಸ…

ನಮ್ಮ ರಾಜ್ಯದ ಬಡವರು, ಕಡುಬಡವರಿಗೆ ಮನೆ ಕೊಟ್ಟು ಆಮೇಲೆ ಅಕ್ಕಪಕ್ಕದ ರಾಜ್ಯದವರ ಬಗ್ಗೆ ಚಿಂತನೆ ಮಾಡಿ ಎಂದು ಆಗ್ರಹಿಸಿದರು. ಸಿದ್ದರಾಮಯ್ಯನವರು ಕನ್ನಡ ನಾಡಿನ ಮುಖ್ಯಮಂತ್ರಿಗಳು. ಇದನ್ನು ನೆನಪಿಸಬೇಕಾದುದು ದುರ್ದೈವ ಎಂದು ವಿಜಯೇಂದ್ರ ಅವರು ತಿಳಿಸಿದರು.
ಕನ್ನಡಿಗರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಲು ಹೊರಟಿರುವುದು ನಾಡಿನ ದುರ್ದೈವ ಎಂದು ತಿಳಿಸಿದರು.

ಮಿತಿ ಮೀರಿದ ಡ್ರಗ್ ಮಾಫಿಯ..

ಮಹಾರಾಷ್ಟ್ರದಿಂದ ಪೊಲೀಸರು ಬಂದು ಮುಖ್ಯಮಂತ್ರಿಗಳ ತವರು ಜಿಲ್ಲೆಯ ಒಂದು ಮಾದಕವಸ್ತು ಕಾರ್ಖಾನೆಯ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಮೊನ್ನೆ ಮಹಾರಾಷ್ಟ್ರದಿಂದ ಪೊಲೀಸರು ಮತ್ತೆ ಬಂದು ಬೆಂಗಳೂರಿನಲ್ಲಿ ಕಾರ್ಖಾನೆ ವಶಕ್ಕೆ ಪಡೆದಿದ್ದಾರೆ. ರಾಜ್ಯ ಸರಕಾರ, ಪೊಲೀಸ್ ಇಲಾಖೆ, ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಕೇಳಿದರು. ಕಾಂಗ್ರೆಸ್ ಸರಕಾರವು ಕರ್ನಾಟಕವನ್ನು ಉಡ್ತಾ ಕರ್ನಾಟಕ ಮಾಡಲು ಹೊರಟಂತಿದೆ ಎಂದು ಟೀಕಿಸಿದರು.

ಗ್ರಾಮ ಗ್ರಾಮಕ್ಕೆ ಹಬ್ಬಿದ ಡ್ರಗ್ ಮಾಫಿಯ ನಿಯಂತ್ರಣದಲ್ಲಿ ಗೃಹ ಸಚಿವರು ಸಂಪೂರ್ಣ ವಿಫಲವಾಗಿದ್ದಾರೆ. ಇಲ್ಲಿನ ಡ್ರಗ್ ಮಾಫಿಯ ನಿಲ್ಲಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರು ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಅವರ ಅನುಮತಿಗೆ ಕಾಯುತ್ತಿದ್ದಂತಿದೆ ಎಂದು ತಿಳಿಸಿದರು. ಗೃಹ ಸಚಿವರು ಅಸಮರ್ಥರಾಗಿದ್ದಾರೆ; ಸಂಪೂರ್ಣ ವಿಫಲವಾಗಿದ್ದಾರೆ ಎಂದರು.

ಕರ್ನಾಟಕವನ್ನು ಕುಡುಕರ ರಾಜ್ಯ ಮಾಡಲು ಹೊರಟ ಸಿಎಂ

ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ ಸಚಿವೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಫೆಬ್ರವರಿ, ಮಾರ್ಚ್ ತಿಂಗಳಿನ 5 ಸಾವಿರ ಕೋಟಿ ಫಲಾನುಭವಿಗಳಿಗೆ ಸಿಕ್ಕಿಲ್ಲ. ಹಣಕಾಸು ಸಚಿವರಾದ ಮುಖ್ಯಮಂತ್ರಿಗಳು ಈ ಕುರಿತು ಉತ್ತರ ಕೊಡಬೇಕಿತ್ತಲ್ಲವೇ? ಗ್ಯಾರಂಟಿ ಯೋಜನೆಗೆ ಹಣ ಕ್ರೋಡೀಕರಿಸಲು ಸಾಧ್ಯ ಆಗದೇ ಮುಖ್ಯಮಂತ್ರಿಗಳು ಅಬಕಾರಿ ಟಾರ್ಗೆಟ್ ಅನ್ನು ಶೇ 35ರಷ್ಟು ಏರಿಸಿದ್ದು, ಕರ್ನಾಟಕವನ್ನು ಕುಡುಕರ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು. ಡಾಬಾ, ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಮಾರಾಟ ಆಗುತ್ತಿದೆ ಎಂದು ದೂರಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ನಿಖಿಲ್ ಕತ್ತಿ, ವಿಠ್ಠಲ ಹಲಗೇಕರ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾμï ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಅನಿಲ್ ಬೆನಕೆ, ಬಿಜೆಪಿ ಮುಖಂಡರಾದ ಎಂ.ಎಲ್.ಮುತ್ತೆನ್ನವರ, ಎಂ.ಬಿ.ಜಿರಲಿ, ರವಿ ಪಾಟೀಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು

Related Posts

Leave a Reply

Your email address will not be published. Required fields are marked *