ಯಾವ ಸಾಧನೆಗೆ ಈ ಸಂಭ್ರಮಾಚರಣೆ ಸಿಎಂ ಸಿದ್ದರಾಮಯ್ಯ ಅವರೇ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ , ಸಾವಿರ ದಿನಗಳ ಆಡಳಿತದ ಹೆಸರಲ್ಲಿ ಸಂಭ್ರಮಿಸಲು ಹೊರಟಿರುವ ನಿಮಗೆ ರಾಜ್ಯದ ವಾಸ್ತವ ಸ್ಥಿತಿ ಅರಿವಿದೆಯೇ? ನಿಮ್ಮ ಈ ‘ಸಂಭ್ರಮ’ ಜನಾಕ್ರೋಶವನ್ನು ಅಣಕಿಸುವ ವಿಕೃತ ಮನಸ್ಸಿನ ಅಟ್ಟಹಾಸದಂತೆ ಕಾಣುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಸಾಲದ ಹೊರೆ ₹7.64 ಲಕ್ಷ ಕೋಟಿ ದಾಟಿದೆ, ಪ್ರತಿಯೊಬ್ಬ ಕನ್ನಡಿಗನ ಮೇಲೆ ₹1 ಲಕ್ಷಕ್ಕೂ ಹೆಚ್ಚಿನ ಸಾಲದ ಹೊರೆ ಇದೆ. ಅವೈಜ್ಞಾನಿಕ ಯೋಜನೆಗಳಿಗಾಗಿ, ಕಮಿಷನ್ ದಾಹಕ್ಕಾಗಿ, ಭ್ರಷ್ಟಾಚಾರಕ್ಕಾಗಿ, ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ, ರಾಜ್ಯವನ್ನು ದಿವಾಳಿಯ ಅಂಚಿಗೆ ತಳ್ಳಿದ್ದಕ್ಕಾ ಈ ಸಂಭ್ರಮ, ಬಡವರ ಜೇಬಿಗೆ ಕತ್ತರಿ ಹಾಕಿದ್ದಕ್ಕಾ, ನೀರು, ಹಾಲು, ಪೆಟ್ರೋಲ್, ಡೀಸೆಲ್, ಬಸ್ಸು, ಮೆಟ್ರೋ, ವಿದ್ಯುತ್ ದರ, ಆಸ್ತಿ ತೆರಿಗೆ ಸೇರಿದಂತೆ ಸಿಕ್ಕ ಸಿಕ್ಕ ಕಡೆ ಬೆಲೆ, ತೆರಿಗೆ ಏರಿಸಿ ಬಡವರು, ಮಧ್ಯಮ ವರ್ಗದವರನ್ನು ಸುಲಿಗೆ ಮಾಡಿದ್ದಕ್ಕೆ ವಿಜಯೋತ್ಸವ ಆಚರಿಸುತ್ತಿದ್ದೀರಾ, ಮುಡಾ ಮತ್ತು ವಾಲ್ಮೀಕಿ ಹಗರಣದ ಖುಷಿಗಾ ಎಂದು ಪ್ರಶ್ನಿಸಿದ್ದಾರೆ.
❓ಯಾವ ಸಾಧನೆಗೆ ಈ ಸಂಭ್ರಮಾಚರಣೆ?
ಸಿಎಂ @siddaramaiah ನವರೇ ಹಾಗೂ ಡಿಸಿಎಂ @DKShivakumar ಅವರೇ,
ಸಾವಿರ ದಿನಗಳ ಆಡಳಿತದ ಹೆಸರಲ್ಲಿ ಸಂಭ್ರಮಿಸಲು ಹೊರಟಿರುವ ನಿಮಗೆ ರಾಜ್ಯದ ವಾಸ್ತವ ಸ್ಥಿತಿ ಅರಿವಿದೆಯೇ? ನಿಮ್ಮ ಈ 'ಸಂಭ್ರಮ' ಜನಾಕ್ರೋಶವನ್ನು ಅಣಕಿಸುವ ವಿಕೃತ ಮನಸ್ಸಿನ ಅಟ್ಟಹಾಸದಂತೆ ಕಾಣುತ್ತಿದೆ.
❓ಖಜಾನೆ ಖಾಲಿ ಮಾಡಿದ ಸಾಧನೆಗಾ?… pic.twitter.com/0dymfNa9uV
— R. Ashoka (@RAshokaBJP) January 14, 2026
ಮುಖ್ಯಮಂತ್ರಿಗಳೇ ನೇರವಾಗಿ ಭಾಗಿಯಾಗಿರುವ ಮುಡಾ ಹಗರಣ ಮತ್ತು ದಲಿತರ ಹಣ ಲೂಟಿಯಾದ ವಾಲ್ಮೀಕಿ ನಿಗಮದ ಹಗರಣಗಳಲ್ಲಿ ತನಿಖಾ ಸಂಸ್ಥೆಗಳನ್ನು ಬಳಸಿ ‘ಬಿ-ರಿಪೋರ್ಟ್’ ‘ಕ್ಲೀನ್ ಚೀಟ್’ ನಾಟಕವಾಡಿದ್ದಕ್ಕಾ ಈ ಹಬ್ಬ, ರೈತರ ಸಂಕಷ್ಟಕ್ಕೆ ಸ್ಪಂದಿಸದ ದರ್ಪದ ಧೋರಣೆಗಾ, ನೆರೆ, ಬರ ಪರಿಹಾರ ಕೊಡದೆ, ಕಬ್ಬು, ಮೆಕ್ಕೆ ಜೋಳ ರೈತರು ಸೂಕ್ತ ಬೆಲೆ ಕೊಡುವಂತೆ ಬೀದಿಗಿಳಿದು ಪ್ರತಿಭಟನೆ ಮಾಡಿದರೂ ಸ್ಪಂದಿಸದೆ, ಸಕಾಲಕ್ಕೆ ಖರೀದಿ ಕೇಂದ್ರಗಳನ್ನು ತೆರೆಯದೇ ಮಧ್ಯವರ್ತಿಗಳ ಮುಲಾಜಿಗೆ ತಳ್ಳಿ ಅನ್ನದಾತನ ಹೊಟ್ಟೆ ಹೊಡೆದಿದ್ದಕ್ಕಾ ಈ ಅಬ್ಬರ ಎಂದು ಕೇಳಿದ್ದಾರೆ.
ಗುತ್ತಿಗೆದಾರರ ‘ಕಮಿಷನ್’ ಕಿರುಕುಳಕ್ಕಾ, 40% ಕಮಿಷನ್ ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದವರು ಈಗ 60%ಕ್ಕೂ ಹೆಚ್ಚು ಕಮಿಷನ್ ಬೇಡಿಕೆಯಿಟ್ಟು ಗುತ್ತಿಗೆದಾರರನ್ನು ಆತ್ಮಹತ್ಯೆಯ ಹಾದಿಗೆ ತಳ್ಳಿದ್ದಕ್ಕೆ ಈ ಸಂಭ್ರಮವೇ, ಯುವಕರ ಕನಸು ನುಚ್ಚುನೂರು ಮಾಡಿದ್ದಕ್ಕಾ, ಕೆಪಿಎಸ್‌ಸಿ ಪರೀಕ್ಷಾ ಅಕ್ರಮಗಳು, ಪೇಪರ್ ಲೀಕ್ ಮಾಫಿಯಾ ಮತ್ತು ನೇಮಕಾತಿಯಲ್ಲಿನ ವಿಳಂಬದಿಂದ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡಿದ್ದಕ್ಕೆ ವಿಜಯೋತ್ಸವವೇ, ಹದಗೆಟ್ಟ ಕಾನೂನು ಸುವ್ಯವಸ್ಥೆಗಾ, ಸರಣಿ ಕೊಲೆಗಳು, ಕೋಮು ದಳ್ಳುರಿಗಳು, ಲವ್ ಜಿಹಾದ್ ಪ್ರಕರಣಗಳು ಮತ್ತು ಹಗಲು ಹೊತ್ತಿನಲ್ಲೇ ಎಗ್ಗಿಲ್ಲದೆ ನಡೆಯುತ್ತಿರುವ ಬ್ಯಾಂಕ್, ಎಟಿಎಂ ದರೋಡೆಗಳಿಂದ ರಾಜ್ಯ ‘ಅಪರಾಧಗಳ ತಾಣ’ವಾಗಿರುವುದಕ್ಕೆ ಸಂಭ್ರಮಿಸುತ್ತಿದ್ದೀರಾ ಎಂದು ಕುಟುಕಿದ್ದಾರೆ.
ಬಾಣಂತಿಯರ ಸಾವಿನ ನೋವಿನ ಮೇಲೆಯೇ, ಕಳಪೆ ಔಷಧಿ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದ ನೂರಾರು ಬಾಣಂತಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಣ ಕಳೆದುಕೊಂಡಾಗಲೂ ಕಣ್ಣೀರು ಒರೆಸದ ನೀವು, ಈಗ ಯಾವ ಮುಖ ಹೊತ್ತು ಸಮಾವೇಶ ಮಾಡುತ್ತಿದ್ದೀರಿ, ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಕೊಡದೆ ಮಹಿಳೆಯರಿಗೆ ವಂಚನೆ ಮಾಡಿದ್ದಕ್ಕಾ, ಎರಡು ತಿಂಗಳ ಗೃಹಲಕ್ಷ್ಮಿ ಹಣ ₹5000 ಕೋಟಿ ರೂಪಾಯಿ ಗುಳುಂ ಮಾಡಿ, “ಪ್ರತಿ ತಿಂಗಳು ಕರೆಕ್ಟಾಗಿ ಕೊಡೋದಕ್ಕೆ ಇದೇನು ಸಂಬಳಾನಾ” ಎಂದು ಮಹಿಳೆಯರನ್ನು ಅಪಮಾನಿಸಿದ ಸಂತೋಷಕ್ಕಾ, ತುಷ್ಟೀಕರಣ ರಾಜಕಾರಣವನ್ನ ಪರಾಕಾಷ್ಠೆಗೆ ಕೊಂಡೊಯ್ದದ್ದಕ್ಕಾ ಎಂದು ಪ್ರಶ್ನಿಸಿದ್ದಾರೆ.
ಗಣೇಶ ವಿಸರ್ಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಿ, ದೇಶವಿರೋಧಿ ಘೋಷಣೆ ಕೂಗುವವರನ್ನು ರಕ್ಷಿಸುತ್ತಾ ಒಂದು ವರ್ಗದ ಓಲೈಕೆ ಮಾಡುತ್ತಿರುವುದಕ್ಕೆ ಈ ಸಂಭ್ರಮವೇ, ಬ್ರ್ಯಾಂಡ್ ಬೆಂಗಳೂರಿನ ಬವಣೆಗಾ, ಸ್ವಲ್ಪ ಮಳೆ ಬಂದರೂ ಮುಳುಗುವ ಬೆಂಗಳೂರು, ಗುಂಡಿ ಬಿದ್ದ ರಸ್ತೆಗಳು ಮತ್ತು ಮೂಲಸೌಕರ್ಯದ ಕೊರತೆಯಿಂದ ಜನರು ನರಳುತ್ತಿದ್ದರೆ, ನೀವು ಕೇವಲ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯಿಸುತ್ತಿರುವುದು ನಾಚಿಕೆಗೇಡಲ್ಲವೇ, ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ ಸಾರ್ವಜನಿಕರ ತೆರಿಗೆ ಹಣದಲ್ಲಿ ಇಂತಹ ವೈಭವದ ಸಮಾವೇಶಗಳನ್ನು ಮಾಡುತ್ತಿರುವ @INCKarnataka ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.


