ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ , ಈ ವಿಷಯದಲ್ಲಿ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಬಗ್ಗೆ ನಾನು ಏನೇ ಹೇಳಿದರೂ ಮಾಧ್ಯಮದವರು ಅದನ್ನೇ ದಿನಗಟ್ಟಲೇ ಪ್ರಸಾರ ಮಾಡಿ ವಿವಾದ ಸೃಷ್ಟಿಸುತ್ತಾರೆ. ಆದ್ದರಿಂದ ಸಿಎಂ ಬದಲಾವಣೆ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಬಾರದೆಂದು ತೀರ್ಮಾನಿಸಿದ್ದೇನೆ” ಎಂದು ಹೇಳಿದರು. ಇದೇ ವೇಳೆ, ಶಾಸಕರ ವಿದೇಶ ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನನಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಶಾಸಕರು ವೈಯಕ್ತಿಕ ಹಣದಿಂದಲೇ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಯಾವುದೇ ಸರ್ಕಾರಿ ಹಣವನ್ನು ಬಳಸಿಕೊಂಡಿಲ್ಲ. ವೈಯಕ್ತಿಕವಾಗಿ ತೆರಳಿದರೆ ಅದರಲ್ಲಿ ತಪ್ಪಿಲ್ಲ” ಎಂದರು.
ಎಲ್ಲಿ ಕುರ್ಚಿ ಜಟಾಪಟಿ ಆಗ್ತಿದೆ, ಆ ತರಹದ್ದು ಏನು ಇಲ್ಲಾ, ನೀವು ಮೀಡಿಯಾದವರು ಸೃಷ್ಟಿ ಮಾಡಿರುವುದು ಅಷ್ಟೇ, ಶಾಸಕರಿಗೆ ಅದು ಏನು ಇಲ್ಲಾ ಅಂಥ ಗೊತ್ತು, ಹಾಗಾಗಿ ಆರಾಮವಾಗಿ ಹೋಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಉಚಿತ ಯೋಜನೆಗಳ ಘೋಷಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮಾಜದಲ್ಲಿ ಬೆಲೆ ಏರಿಕೆ ಮತ್ತು ಆರ್ಥಿಕ ಅಸಮಾನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಬಡವರ ಪರವಾಗಿ ಯೋಜನೆಗಳನ್ನು ಜಾರಿಗೆ ತರುವುದು ಅವಶ್ಯ ಎಂದು ಹೇಳಿದರು. “ಬಡವರ ಕೈಗೆ ಹಣ ಸಿಕ್ಕರೆ ಅವರು ಜೀವನ ನಿರ್ವಹಣೆಗೆ ಬಳಸುತ್ತಾರೆ. ಅದೇ ಹಣ ಮಾರುಕಟ್ಟೆಗೆ ಹರಿದು ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ಸಮಗ್ರ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಎಲೆಕ್ಷನ್‌ಗೆ ಎರಡು, ಮೂರು ತಿಂಗಳು ಇದ್ದಾಗ ಉಚಿತ ಗ್ಯಾರೆಂಟಿ ಕೊಡ್ತಾರಲ್ಲಾ ಅದು ಆರ್ಥಿಕ ವ್ಯವಸ್ಥೆಗೆ ನಿಜವಾಗಲೂ ಮಾರಕ ” ಎಂದು ಅಭಿಪ್ರಾಯಪಟ್ಟರು.
ಉಚಿತ ಯೋಜನೆಗಳ ಘೋಷಣೆ ಮಾಡುವುದು ಮಾತ್ರ ಸಾಲದು, ರಸ್ತೆ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಿ ಕೇವಲ ಉಚಿತ ಯೋಜನೆಗಳನ್ನು ಘೋಷಿಸಿದರೆ ಅದು ತಪ್ಪಾಗುತ್ತದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳೂ ಸಮಾನವಾಗಿ ನಡೆಯುತ್ತಿವೆ ಎಂದು ಸಮರ್ಥಿಸಿಕೊಂಡರು.
ಸ್ನೇಹಮಯಿ ಕೃಷ್ಣ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ ಅವರು, ಹೌದಾ, ನನಗೆ ಗೊತ್ತಿಲ್ಲ, ನೀವು ಹೇಳಿದಾಗಲೇ ನನಗೆ ಗೊತ್ತಾಗುತ್ತಿರುವುದು, ಹೌದಾ, ಏನು ಕಾರಣಕ್ಕೆ ಎಂದು ಮರು ಪ್ರಶ್ನಿಸಿದರು. ಆಧಾರಹಿತ ಆರೋಪಗಳನ್ನು ಸುಮ್ಮನೆ ಮಾಡಬಹುದಾ, ಪಾಪ ಅಧಿಕಾರಿಗಳ ಮೇಲೆ ಸುಮ್ಮನೆ ತೇಜೋವಧೆ, ಆರೋಪ ಮಾಡಿದಾಗ ಖಂಡಿತಾ ಅದಕ್ಕೆ ಶಿಕ್ಷೆಯಾಗಬೇಕು, ಕ್ರಮ ಕೈಗೊಳ್ಳಬೇಕು. ಯಾವುದೇ ಆಧಾರ ಇಲ್ಲದೆ ಒಬ್ಬ ಅಧಿಕಾರಿ ಮೇಲೆ ಆರೋಪ, ತೇಜೋವಧೆ ಮಾಡಿದ ಮೇಲೆ ಏಕೆ ಸುಮ್ಮನಿರುತ್ತಾರೆ, ಖಂಡಿತಾ ಅವರ ಮೇಲೆ ಕ್ರಮ ತೆಗೆದುಕೊಳ್ತಾರೆ. ಮುಡಾ ಮೇಲಿನ ಆರೋಪಗಳನ್ನು ತನಿಖೆಗೆ ಕೊಟ್ಟಿದ್ದೇವೆ, ಕೆಂಪಣ್ಣ ಆಯೋಗವೂ ಇದೆ, ಮುಡಾದಲ್ಲಿ ಏನಾದರೂ ಅವ್ಯವಹಾರ ಆಗಿದ್ರೆ ಅದರ ವಿರುದ್ಧ ಕ್ರಮ ತೆಗೆದುಕೊಳ್ತಾರೆ ಎಂದು ಹೇಳಿದರು.


