Menu

ಬೆಂಗಳೂರು ಉದ್ಯಮಿಯ ಮನೆಯಲ್ಲಿ ದರೋಡೆ ಮಾಡಿಸಿದ್ದು ಆಪ್ತ ಸ್ನೇಹಿತ

ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹೊಂಬೇಗೌಡ ಎಂಬವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ರೂವಾರಿ ಅವರ ಸ್ನೇಹಿತ ಬೆಟ್ಟೇಗೌಡ ಎಂಬುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ಬೆಂಗಳೂರಿನ ಬಿಇಎಲ್ ಲೇಔಟ್‌ನಲ್ಲಿ ಪೊಲೀಸರ ಹೆಸರಲ್ಲಿ ಮನೆಗೆ ಬಂದ ಗುಂಪೊಂದು ರಿಯಲ್ ಎಸ್ಟೇಟ್ ಉದ್ಯಮಿ ಮನೆಯಿಂದ 20 ಲಕ್ಷ ರೂಪಾಯಿ ಮತ್ತು ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಪ್ರಕರಣವನ್ನು ಭೇದಿಸಿರುವ ಬ್ಯಾಡರಹಳ್ಳಿ ಪೊಲೀಸರು ನಾಗೇಂದ್ರ ಹಾಗೂ ಬಚ್ಚನ್ ಎಂಬ ಆರೋಪಿಗಳನ್ನು ಬಂಧಿಸಿದ್ದರು. ತನಿಖೆ ಮುಂದುವರಿಸಿ ಪ್ರಕರಣದ ಹಿಂದಿನ ಮಾಸ್ಟರ್​​ ಮೈಂಡ್‌ ಯಾರೆಂದು ಬಯಲಿಗೆಳೆದಿದ್ದಾರೆ.

ಹೊಂಬೇಗೌಡ ಸ್ನೇಹಿತ ಬೆಟ್ಟೇಗೌಡ ಎಂಬಾತನೇ ಈ ದರೋಡೆಯ ರೂವಾರಿ ಎಂಬುದು ತಿಳಿದು ಬಂದಿದೆ. ಸೈಟ್​​ ಮಾರುವ ಸಂಬಂಧ ಸ್ಟಾಂಪ್ ವೆಂಡರ್ ಆಗಿರುವ ಬೆಟ್ಟೇಗೌಡನ ಬಳಿಯೇ ಹೊಂಬೇಗೌಡ ಪೇಪರ್​​ ಮಾಡಿಸಿದ್ದರು. ಸ್ನೇಹಿತನ ಬಳಿ ಸೈಟ್ ಮಾರಿದ ಹಣ ಇದೆ‌ ಎಂದು ತಿಳಿದಿದ್ದ ಆರೋಪಿ, ದರೋಡೆ ಮಾಡುವಂತೆ ಜೈಲಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಾಗೇಂದ್ರನಿಗೆ ಹೇಳಿದ್ದ. ಶಿವಾಜಿನಗರದಲ್ಲಿ ಶೂಟಿಂಗ್​​ಗೆ ಎಂದು ಹೇಳಿ ಸಬ್ ಇನ್ಸ್​​ಪೆಕ್ಟರ್ ಡ್ರೆಸ್ ಬಾಡಿಗೆಗೆ ತಂದಿದ್ದ ನಾಗೇಂದ್ರ, ಅದೇ ಡ್ರೆಸ್​​ ಹಾಕಿಕೊಂಡು ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಎಂಬುದು ಗೊತ್ತಾಗಿದೆ.

ಹೊಂಬೇಗೌಡ ಅವರು ಪತ್ನಿ ಮಂಗಳಮ್ಮ ಹಾಗೂ ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ಇದ್ದಾಗ ಪೊಲೀಸ್‌ ವೇಷದಲ್ಲಿ ಮನೆಗೆ ಪ್ರವೇಶಿಸಿದ್ದ ಆರೋಪಿಗಳು, ತಾವು ಯಲಹಂಕ ಠಾಣೆಯಿಂದ ಬಂದಿದ್ದೇವೆ ಎಂದು ತಿಳಿಸಿದ್ದರು. ಬ್ಯಾಗ್​​ ಮತ್ತು ಡೈರಿಯನ್ನೂ ಹಿಡಿದು ಬಂದಿದ್ದ ಕಾರಣ ಆರಂಭದಲ್ಲಿ ಮನೆಯವರೂ ಆರೋಪಿಗಳ ಮಾತು ನಂಬಿದ್ದರು. ಬಳಿಕ ಆರೋಪಿಗಳು ವೃದ್ಧ ದಂಪತಿಯನ್ನು ಬಂದೂಕು ಮತ್ತು ಚಾಕುವಿನಿಂದ ಬೆದರಿಸಿ ಕೈಕಾಲುಗಳನ್ನು ಕಟ್ಟಿ ನಗದು ಮತ್ತು ಚಿನ್ನಾಭರಣ ದೋಚಿದ್ದರು.

Related Posts

Leave a Reply

Your email address will not be published. Required fields are marked *