ಲಂಚಗುಳಿತನ, ಸ್ವಜನ ಪಕ್ಷಪಾತ ಮತ್ತು ಅಕ್ರಮ, ಅವ್ಯವಹಾರಗಳೇ ಇಂದು ಸರ್ಕಾರಿ ಹುದ್ದೆಗಳ ನೇಮಕಾತಿ ಸುತ್ತಲೂ ಹರಡಿಕೊಂಡಿರುವ ಅನಿಷ್ಟ. ಯುವಜನತೆಯ ಪಾಲಿಗೆ ಇದು ಶಾಪ ಕೂಡಾ. ಈ ಸಾಮಾಜಿಕ ಪೀಡೆಯನ್ನು ಸರ್ಕಾರ ನಿವಾರಿಸಲು ಗಟ್ಟಿ ಪ್ರಯತ್ನ ಮಾಡದಿದ್ದಲ್ಲಿ ವಯೋಮಿತಿ ಸಡಿಲಿಕೆಯ ಸರ್ಕಾರದ ಆಶಯ ನಿಜವಾದ ಅರ್ಥದಲ್ಲಿ ಈಡೇರುವುದಿಲ್ಲ.
ಸಿವಿಲ್ ಸೇವಾ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ಮಹತ್ತರ ತೀರ್ಮಾನ ಕೈಗೊಂಡಿದೆ. ವಯೋಮಿತಿಯನ್ನು ಐದು ವರ್ಷಗಳ ಕಾಲ ಸಡಿಲಿಕೆಗೊಳಿಸಿ ರಾಜ್ಯ ಸಂಪುಟ ನಿರ್ಧಾರ ಕೈಗೊಂಡಿರುವುದು ಗಮನಾರ್ಹ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಸಿವಿಲ್ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸುವ ಲಕ್ಷಾಂತರ ಮಂದಿ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸಚಿವ ಸಂಪುಟದ ತೀರ್ಮಾನ ನೆರವಾಗಲಿದೆ.
ಸಾಮಾನ್ಯ ವರ್ಗಕ್ಕೆ ಪ್ರಸಕ್ತ ನಿಗದಿಯಾದ ೩೫ವರ್ಷಗಳ ವಯೋಮಿತಿಯನ್ನು ಸರ್ಕಾರವೀಗ ೪೦ ವರ್ಷಗಳವರೆಗೆ ವಿಸ್ತರಿಸಿದೆ. ಹಾಗೆಯೇ ಪರಿಶಿಷ್ಟರು ಮತ್ತು ಇತರೆ ವರ್ಗಗಳಿಗೆ ನಿಗದಿಪಡಿಸಲಾದ ೩೮ ವರ್ಷಗಳ ವಯೋಮಿತಿಯನ್ನು ೪೩ ವರ್ಷ ಗಳಿಗೆ ವಿಸ್ತರಿಸಿದೆ. ಸರ್ಕಾರಿ ಉದ್ಯೋಗಕ್ಕೆ ಚಾತಕಪಕ್ಷಿಗಳಂತೆ ಕಾಯುತ್ತ ಹತ್ತಾರು ಸಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ವಿಫಲರಾದವರಿಗೆ ಸರ್ಕಾರದ ಈ ತೀರ್ಮಾನ ಒಂದರ್ಥದಲ್ಲಿ ಸಂಜೀವಿನಿ. ಹತ್ತು ಸಾರಿ ಪರೀಕ್ಷೆ ಬರೆದು ವಿಫಲನಾದವನು ಹನ್ನೊಂದನೆ ಸಾರಿ ಇದೇ ಪರೀಕ್ಷೆಯನ್ನು ಬರೆದ ವ್ಯಕ್ತಿ ಸಫಲವಾಗುವ ಸಾಧ್ಯತೆಗಳು ಅಧಿಕ. ಈ ದಿಶೆಯಲ್ಲಿ ತಮ್ಮ ಮೇಲಿನ ನಂಬಿಕೆ ಮತ್ತು ವಿಶ್ವಾಸವನ್ನು ಯುವಜನತೆ ಕಳೆದುಕೊಳ್ಳದೆ, ಸರ್ಕಾರವು ಕಾಲಕಾಲಕ್ಕೆ ಕೈಗೊಳ್ಳುವ ಕೆಲವೊಂದು ಅನುಕೂಲಕರ ತೀರ್ಮಾನಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವುದು ಲೇಸು.
ಸಿವಿಲ್ ಸೇವಾ ನೇಮಕಾತಿಯ ವಯೋಮಿತಿ ಸಡಿಲಿಕೆಯನ್ನು ಐದು ವರ್ಷಗಳ ಕಾಲ ವಿಸ್ತರಿಸಿದ ಮಾತ್ರಕ್ಕೆ ರಾಜ್ಯ ಸರ್ಕಾರದ ಹೊಣೆಗಾರಿಕೆ ಮುಗಿಯಲಿಲ್ಲ. ಇದಕ್ಕೆ ನೇರ ಸಂಬಂಧವನ್ನು ಹೊಂದಿರುವ ಮೀಸಲಾತಿ ಗೊಂದಲ ಮತ್ತು ಗೋಜಲು ಕೂಡಾ ತೀರ್ಮಾನವಾಗಬೇಕು. ಇಲ್ಲವಾದಲ್ಲಿ ಸರ್ಕಾರದ ವಯೋಮಿತಿ ಸಡಿಲಿಕೆಯ ತೀರ್ಮಾನಕ್ಕೆ ತಾರ್ಕಿಕ ಅರ್ಥವಿರುವುದಿಲ್ಲ. ಮೀಸಲಾತಿ ವಿಷಯದಲ್ಲಿ ರಾಜ್ಯಸರ್ಕಾರ ಕೈಗೊಳ್ಳುವ ತೀರ್ಮಾನ ಬಹಳ ಮುಖ್ಯ. ಬಹಳಷ್ಟು ನೇಮಕಾತಿಗಳು ಇಂದು ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದು ಕೆಎಟಿ ಮತ್ತು ರಾಜ್ಯ ಹೈಕೋರ್ಟ್ ಮುಂದೆ ಸಾವಿರಾರು ವ್ಯಾಜ್ಯಗಳು ವಿಚಾರಣೆಯ ಹಂತದಲ್ಲಿವೆ. ಒಟ್ಟಿನಲ್ಲಿ ಸರ್ಕಾರವೀಗ ವಯೋಮಿತಿಯನ್ನು ವಿಸ್ತರಿಸುವ ಜೊತೆ ಜೊತೆಗೆ ಯುವಜನತೆಯ ಸರ್ಕಾರಿ ನೌಕರಿ ಕನಸಿಗೆ, ವಿವಿಧ ನ್ಯಾಯಾಲಯಗಳಲ್ಲಿ ಎದುರಾಗಿರುವ ಕಾನೂನು ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುತುವರ್ಜಿ ವಹಿಸುವುದೂ ಅನಿವಾರ್ಯ.
ಸಿವಿಲ್ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಅಭ್ಯರ್ಥಿಗಳಿಗೆ ಸರ್ಕಾರಿ ಸೇವೆಯ ಬದ್ಧತೆ, ದಕ್ಷತೆ ಮತ್ತು ಪ್ರಾಮಾಣಿಕತೆ ಮತ್ತು ಧೈರ್ಯ ವಿಶ್ವಾಸಗಳೂ ಮುಖ್ಯ. ದೇಶದ ಸಂವಿಧಾನದಲ್ಲಿ ಕಾರ್ಯಾಂಗಕ್ಕೆ ವಿಶೇಷ ಪ್ರಾಮುಖ್ಯತೆ. ಯಾರು ಸಿವಿಲ್ ಸೇವೆಗಳ ಪರೀಕ್ಷೆಗಳಲ್ಲಿ ಉತ್ತಮ ರ್‍ಯಾಂಕಿಂಗ್ ಮೂಲಕ ತೇರ್ಗಡೆಯಾಗುವರೋ, ಅಂತಹ ಅಭ್ಯರ್ಥಿಗಳ ಸುಗಮ ಆಯ್ಕೆಯೂ ಪ್ರಸ್ತುತ. ಇಂದು ಸರ್ಕಾರಿ ನೌಕರಿಗೆ ನೇಮಕಾತಿ ಎಂದ ಕೂಡಲೇ ಸಹಜವಾಗಿ ಯುವ ಜನತೆಯಲ್ಲಿ ಅತಿದೊಡ್ಡ ನಕಾರಾತ್ಮಕ ಧೋರಣೆ ಇದೆ. ಇದು ಯುವಜನತೆಯ ತೀವ್ರ ನಿರಾಶೆಗೂ ಕಾರಣವಾಗಿದೆ. ಲಂಚಗುಳಿತನ, ಸ್ವಜನ ಪಕ್ಷಪಾತ ಮತ್ತು ಅಕ್ರಮ, ಅವ್ಯವಹಾರಗಳೇ ಇಂದು ಸರ್ಕಾರಿ ಹುದ್ದೆಗಳ ನೇಮಕಾತಿ ಸುತ್ತಲೂ ಹರಡಿಕೊಂಡಿರುವ ಅನಿಷ್ಟ. ಯುವಜನತೆಯ ಪಾಲಿಗೆ ಇದು ಶಾಪ ಕೂಡಾ. ಈ ಸಾಮಾಜಿಕ ಪೀಡೆಯನ್ನು ಸರ್ಕಾರ ನಿವಾರಿಸಲು ಗಟ್ಟಿ ಪ್ರಯತ್ನ ಮಾಡದಿದ್ದಲ್ಲಿ ವಯೋಮಿತಿ ಸಡಿಲಿಕೆಯ ಸರ್ಕಾರದ ಆಶಯ ನಿಜಾರ್ಥದಲ್ಲಿ ಈಡೇರುವುದಿಲ್ಲ.


