ರಾಷ್ಟ್ರೀಯ ಭದ್ರತಾ ಅಪಾಯಗಳನ್ನು ಗಮನದಲ್ಲಿ ಇರಿಸಿಕೊಂಡು 12 ದೇಶದ ಪ್ರಜೆಗಳು ಅಮೆರಿಕ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ.
ಸ್ಕ್ರೀನಿಂಗ್ ಮತ್ತು ಪರಿಶೀಲನೆಗೆ ಸಂಬಂಧಿಸಿದಂತೆ ಸಮಸ್ಯೆ ಹೊಂದಿರುವ ಮತ್ತು ಅಮೆರಿಕಕ್ಕೆ ಹೆಚ್ಚಿನ ಅಪಾಯ ಉಂಟು ಮಾಡಬಲ್ಲ 12 ದೇಶಗಳ ಪ್ರಜೆಗಳ ಪ್ರವೇಶವನ್ನು ಟ್ರಂಪ್ ಆದೇಶವು ಸಂಪೂರ್ಣವಾಗಿ ನಿರ್ಬಂಧಿಸುತ್ತದೆ ಮತ್ತು ಮಿತಿಗೊಳಿಸುತ್ತದೆ ಎಂದು ಶ್ವೇತಭವನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ನಮ್ಮ ದೇಶಕ್ಕೆ ಬಂದು ನಮಗೆ ಹಾನಿ ಮಾಡಲು ಬಯಸುವ ಅಪಾಯಕಾರಿ ವಿದೇಶಿಗರಿಂದ ಅಮೆರಿಕನ್ನರನ್ನು ರಕ್ಷಿಸುವ ಭರವಸೆಯನ್ನು ಅಧ್ಯಕ್ಷ ಟ್ರಂಪ್ ಈಡೇರಿಸುತ್ತಿದ್ದಾರೆ ಎಂದು ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರಂಪ್ ಆಡಳಿತದ ಮೊದಲ ಅವಧಿಯಲ್ಲಿ ಏಳು ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು. ಡೆಮಾಕ್ರಟಿಕ್ ಸರ್ಕಾರದ ಅಧ್ಯಕ್ಷ ಜೋ ಬೈಡೆನ್ 2021ರಲ್ಲಿ ಈ ನಿರ್ಬಂಧಗಳನ್ನು ರದ್ದುಗೊಳಿಸಿದರು.
ಅಫ್ಘಾನಿಸ್ತಾನ, ಮ್ಯಾನ್ಮಾರ್, ಛಡ್, ಕಾಂಗೋ ಗಣರಾಜ್ಯ, ಈಕ್ವಿಟೇರಿಯಲ್ ಗುನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೋಮಾಲಿಯಾ, ಸುಡಾನ್, ಯೆಮನ್ ದೇಶಗಳ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ಟ್ರಂಪ್ ಆಡಳಿತ ನಿರ್ಬಂಧ ವಿಧಿಸಿದೆ.