Menu

ಸಚಿವೆ ಹೆಬ್ಬಾಳ್ಕರ್‌ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಸಿದ್ದನ್ನು ದೃಢಪಡಿಸಿದ ಸಿಐಡಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಒಮ್ಮೆ ಅವಾಚ್ಯ ಶಬ್ದ ಬಳಸಿರುವುದು ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

ರಾಜ್ಯ ಆಡಳಿತ ಮತ್ತು ಸಿಬ್ಬಂಧಿ ಸುಧಾರಣೆ ಇಲಾಖೆ ನೀಡಿದ್ದ ಸದನದ ವಿಡಿಯೋವನ್ನು ಪರೀಕ್ಷೆಗೆ ಒಳಪಡಿಸಿದಾಗ ಸಿಟಿ ರವಿ ಒಮ್ಮೆ ಅವಾಚ್ಯ ಶಬ್ದ ಬಳಸಿರುವುದು ಫೋರೆನ್ಸಿಕ್ ಪರೀಕ್ಷೆಯಲ್ಲಿ ಸಾಬೀತಾಗಿದೆ.

ಅವಾಚ್ಯ ಶಬ್ದ ಬಳಸಿದ ಧ್ವನಿ ಪತ್ತೆಗೆ ಸಿಟಿ ರವಿ ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಮುಂದಾಗಿದೆ. ಆದರೆ ಸಿಟಿ ರವಿ ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ನ್ಯಾಯಾಲಯದ ಮೂಲಕ ವಿಚಾರಣೆಗೆ ಮತ್ತು ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಚಿಂತನೆ ನಡೆಸಿದೆ.

ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನ ಡಿಸೆಂಬರ್​ 19 ರಂದು ಪರಿಷತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಾತಿನ ಚಕಮಕಿ ನಡುವೆ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಂಸದೀಯ ಪದ ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಹಿರೇಬಾಗೇವಾಡಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ, ಆ ದಿನ ನಡೆದಿದ್ದ ಘಟನಾವಳಿ ಕುರಿತ ವಿಡಿಯೋ ನೀಡುವಂತೆ ಡಿಎಪಿಆರ್​ಗೆ ಪತ್ರ ಬರೆದಿತ್ತು. ಡಿಎಪಿಆರ್ ಇಲಾಖೆ ವಿಡಿಯೋ ನೀಡಿತ್ತು. ಹೆಬ್ಬಾಳ್ಕರ್​ ಅವರನ್ನು ತಾನು ನಿಂದಿಸಿದ್ದಕ್ಕೆ ಅಸಲಿ ವಿಡಿಯೋವೇ ಇಲ್ಲ ಎಂದು ರವಿ ಹೇಳಿದ್ದರು, ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಅದೇ ಮಾತು ಹೇಳಿದ್ದರು.

Related Posts

Leave a Reply

Your email address will not be published. Required fields are marked *