ಜಾತಿ ಗಣತಿ ಸಮೀಕ್ಷೆಯ ಹಿಂದೆ ಕ್ರೈಸ್ತ ಮಿಷನರಿಗಳ ಕೈವಾಡವಿದೆ. ಸರ್ಕಾರ ಸಮೀಕ್ಷೆ ಹೆಸರಲ್ಲಿ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಜೆಂಡಾದಲ್ಲೇ ಹಿಂದೂ ವಿರೋಧಿ ನೀತಿಯಿದೆ. ಹೊಸದಾಗಿ 52 ಜಾತಿಗಳನ್ನು ಸೇರಿಸಿ ಗೊಂದಲ ಮಾಡಿದ್ದರು. ಎಲ್ಲದರ ಮುಂದೆ ಕ್ರಿಶ್ಚಿಯನ್ ಹೆಸರು ತಂದು ಹೊಸ ಜಾತಿಯನ್ನು ಸೃಷ್ಟಿಸಿದ್ದು ಹೇಗೆ?, ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಸೋನಿಯಾ ಗಾಂಧಿಯ ಓಲೈಕೆಗಾಗಿ ಕ್ರಿಶ್ಚಿಯನ್ ಹೆಸರು ತಳುಕು ಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಆರ್ಥಿಕ ಸಮೀಕ್ಷೆ ಅಂದ ಮೇಲೆ ಜಾತಿ ಉಪ ಜಾತಿ ಎಂದು ಯಾಕೆ ಕೇಳಲಾಗುತ್ತಿದೆ? ಸೋನಿಯಾ ಗಾಂಧಿ (Sonia Gandhi) ಮಾರ್ಗದರ್ಶನ ಮೇರೆಗೆ ಜಾತಿ ಗಣತಿ ನಡೆಸಲಾಗುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಗಾಂಧಿ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಿಗೆ ಸ್ಪಷ್ಟತೆಯೇ ಇಲ್ಲ. ಜಾತಿ ತೆಗೆದಿದ್ದೇವೆ ಅಂತಾರೆ, ಕೆಲವು ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ. ತೆಗೆದಿರುವ ಜಾತಿಗಳ ಹೆಸರು ಹೇಳಿದರೂ ಬರೆದುಕೊಳ್ಳುತ್ತೇವೆ ಎಂದಿದ್ದಾರೆ. ಈ ಗೊಂದಲ ಯಾಕೆ ಮೂಡಿಸಬೇಕು. ಸಚಿವರಿಗೆ ಗೌರವ ಇದ್ದರೆ ಸಂಪುಟ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕು. ಸಮುದಾಯಗಳು ಕಾಂಗ್ರೆಸ್ ಸಚಿವರು, ಶಾಸಕರನ್ನು ಕ್ಷಮಿಸುವುದಿಲ್ಲ ಎಂದರು.
ಸಿದ್ದರಾಮಯ್ಯ ಏನು ಮಾಡಲು ಹೊರಟಿದ್ದಾರೋ ಇದು ಅಧಿಕೃತ ಅಲ್ಲ. ಈ ಸಮೀಕ್ಷೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಇದು ಇದು ಅಸಾಂವಿಧಾನಿಕ ಸಮೀಕ್ಷೆ, ಇದು ರಾಜಕಾರಣದ ಓಲೈಕೆಗಾಗಿ ಮಾಡುತ್ತಿರುವ ಸಮೀಕ್ಷೆಯಾಗಿದ್ದು ಈ ಸಮೀಕ್ಷೆಯಿಂದ ಯಾವುದೇ ಜಾತಿಗೂ ನ್ಯಾಯ ಸಿಗುವುದಿಲ್ಲ. ಲಿಂಗಾಯತ ಧರ್ಮ ಒಡೆಯುವ ಸಂಚು ಮಾಡಿದ್ದ ತಂಡವೇ ಈಗ ಹಿಂದೂ ಧರ್ಮ ಒಡೆಯಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಗಣೇಶ ಹಬ್ಬದಲ್ಲಿ ನಿರ್ಬಂಧ ಹಾಕಿದ್ದರು. ಮುಂದಿನ ಸಲ ಗಣೇಶ ಹಬ್ಬವೇ ಇಲ್ಲ ಎನ್ನುತ್ತಾರೆ. ಹಿಂದೂಗಳ ಸಂಖ್ಯೆ ಕಡಿಮೆ ಮಾಡೋದು, ದೇವಸ್ಥಾನಗಳ ಮಲಿನ ಮಾಡೋದು, ಮತಾಂತರ ಹೆಚ್ಚಿಸುವುದು ಕಾಂಗ್ರೆಸ್ ಅಜೆಂಡಾ ಎಂದಿದ್ದಾರೆ.
ಕಾಂತರಾಜ್ ಆಯೋಗಕ್ಕೆ 180 ಕೋಟಿ ರೂ. ನೀಡಿ ನುಂಗಿದ್ದೀರಿ. ಆ ಹಣ ಎಲ್ಲಿ ಹೋಯ್ತು, ಈಗ 425 ಕೋಟಿ ರೂ. ಖರ್ಚು ಮಾಡಲು ಹೊರಟಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಸಮೀಕ್ಷೆ ಎಂದು ಪ್ರಶ್ನಿಸಿದರು.