ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಿಲ್ಲಿಸುವ ಸಂಧಾನ ಮಾಡಿದ್ದು ನಾವು ಎಂಬ ಚೀನಾದ ಹೇಳಿಕೆಯನ್ನು ಭಾರತ ತಿರಸ್ಕರಿಸಿದ್ದು, ಕದನ ವಿರಾಮ ನಿರ್ಧಾರದಲ್ಲಿ ಮೂರನೆಯವರು ಭಾಗಿಯಾಗಿಲ್ಲ ಎಂದು ಹೇಳಿದೆ.
ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನವು ಕದನ ವಿರಾಮಕ್ಕಾಗಿ ಭಾರತದ ಡಿಜಿಎಂಒ ಅವರನ್ನು ವಿನಂತಿಸಿತು. ಉಭಯ ದೇಶಗಳ ಡಿಜಿಎಂಒಗಳ ನಡುವೆ ಮಾತುಕತೆ ನಡೆದು ಕದನ ವಿರಾಮ ನಿರ್ಧಾರಕ್ಕೆ ಬರಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯಗಳಲ್ಲಿ ಮೂರನೇ ವ್ಯಕ್ತಿಗೆ ಯಾವುದೇ ಪಾತ್ರವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಘರ್ಷಣೆ ಉಂಟಾಗಿತ್ತು. ಪ್ರತಿಯಾಗಿ ಭಾರತವು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ್’ ಆರಂಭಿಸಿತ್ತು. ನಂತರ ಈ ಕಾರ್ಯಾಚರಣೆ ಮಿಲಿಟರಿ ನೆಲೆಗಳವರೆಗೆ ವ್ಯಾಪಿಸಿತ್ತು.
ಕದನ ವಿರಾಮವು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒಗಳು) ನಡುವಿನ ನೇರ ಮಾತುಕತೆಯ ಫಲ ಎಂದು ಭಾರತದ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಈ ವರ್ಷ ಚೀನಾ ಮಧ್ಯಸ್ಥಿಕೆ ವಹಿಸಿದ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳ ಉದ್ವಿಗ್ನತೆಯೂ ಸೇರಿದೆ ಎಂದು ಎಂದು ಬೀಜಿಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡುವ ವೇಳೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದರು.
ಶಾಶ್ವತ ಶಾಂತಿಯನ್ನು ನಿರ್ಮಿಸಲು, ನಾವು ವಸ್ತುನಿಷ್ಠ ಮತ್ತು ನ್ಯಾಯಯುತ ನಿಲುವನ್ನು ತೆಗೆದುಕೊಂಡಿದ್ದೇವೆ ಉತ್ತರ ಮ್ಯಾನ್ಮಾರ್‌ನಲ್ಲಿ, ಇರಾನಿನ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆ, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ ಎಂದು ಹೇಳಿದ್ದರು. ಅಮೆರಿಕ ಅಧ್ಯಕ್ಷ ಟ್ರಂಪ್ ಭಾತ- ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ ಈಗಾಗಲೇ ಹಲವು ಬಾರಿ ಹೇಳಿಕೊಂಡಿದ್ದು, ಭಾರತವು ಅದನ್ನೂ ನಿರಾಕರಿಸುತ್ತಲೇ ಬಂದಿದೆ.


