ಅಮೆರಿಕವು ಎಚ್೧ಬಿ ವೀಸಾಗೆ ದುಬಾರಿ ಶುಲ್ಕ ವಿಧಿಸಿದ ಬೆನ್ನಹಿಂದೆಯೇ ಈಗ ಚೀನಾ ಎಚ್ಚೆತ್ತುಕೊಂಡಿದೆ. ಭಾರತದ ಯುವಪ್ರತಿಭೆಗಳನ್ನು ಚಿವುಟಲೆಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಸಗಿರುವ ವೀಸಾ ಆಕ್ರಮಣಕ್ಕೆ ಚೀನಾ ಈಗ ಖಡಕ್ ತಿರುಗೇಟು ನೀಡಿರುವುದು ಗಮನಾರ್ಹ.
ಮುಂದಿನ ತಿಂಗಳು ಒಂದರಿಂದಲೇ ಅನ್ವಯವಾಗುವಂತೆ ಚೀನಾ ಸರ್ಕಾರ ಕೆ ವೀಸಾ ನೀತಿ ಘೋಷಿಸಿದ್ದು, ಇದು ಭಾರತದ ಲಕ್ಷಾಂತರ ಮಂದಿ ಯುವಕ ಮತ್ತು ಯುವತಿಯರ ಪಾಲಿಗೆ ಆಶಾಕಿರಣವಾಗಿದೆ. ಅಮೆರಿಕದ ಕಾಕದೃಷ್ಟಿ ಮತ್ತು ಕುಹಕ ಬುದ್ಧಿಯಿಂದ ಭಾರತದಂತಹ ದೇಶಕ್ಕೆ ಆದ ನಷ್ಟವೇನೂ ಇಲ್ಲ. ಇದರಿಂದ ಭಾರತದ ಸ್ವದೇಶಿ ಉತ್ನನ್ನಗಳ ಸಮರ್ಥ ತಯಾರಿಕೆ ಮತ್ತು ಅವುಗಳಿಗೆ ಸೂಕ್ತ ಮಾರುಕಟ್ಟೆ ನಿರ್ಮಾಣವಾಗುವ ದಿನಗಳೂ ದೂರವಿಲ್ಲ. ಎಚ್ ೧ ಬಿ ವೀಸಾ ಪಡೆದು ಅಮೆರಿಕದಲ್ಲಿ ನೌಕರಿ ಮಾಡಲು ಈಗ ಲಕ್ಷಾಂತರ ಮೌಲ್ಯದ ಡಾಲರ್ ಅಗತ್ಯವಿದೆ. ಇಂತಹ ದುಬಾರಿ ಪ್ರಮಾಣದ ಶುಲ್ಕ ತೆತ್ತು ಅಮೆರಿಕದಂತಹ ಶ್ರೀಮಂತ ದೇಶದಲ್ಲಿ ದೀರ್ಘಕಾಲಾವಧಿಗೆ ನೌಕರಿ ಮುಂದುವರಿಸುವುದೆಂದರೆ ಅದು ಅಸಾಧ್ಯವಾದ ಮಾತು.
ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಕುಟುಂಬಗಳ ಮಕ್ಕಳಿಂದು ಎಂಜನಿಯರಿಂಗ್ ಮತ್ತು ಬಿಸಿನೆಸ್ ವಲಯದ ಶಿಕ್ಷಣದಲ್ಲಿ ಉತ್ತಮ ವಿದ್ಯೆಯನ್ನು ಕಲಿಯುತಿದ್ದು ಇವರಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಮಾಣದ ಬೇಡಿಕೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂದು ಇಡೀ ಪ್ರಪಂಚದಲ್ಲಿ ಶೇ ೬೦ ರಿಂದ ೬೨ ರಷ್ಟು ಯುವ ಸಂಪನ್ಮೂಲವನ್ನು ಹೊಂದಿರುವ ಏಕೈಕ ದೇಶ ಎಂದರೆ ಅದು ಭಾರತ ಎಂಬುದನ್ನು ಮರೆಯುವಂತಿಲ್ಲ. ಇದರ ನೆರವಿಲ್ಲದೆ ಇಂದು ಯಾವ ವಿದೇಶವೂ ತನ್ನ ಕೈಗಾರಿಕೆ ಮತ್ತು ವಾಣಿಜ್ಯ ವಲಯವನ್ನು ವಿಸ್ತರಿಸಲು ಸಾಧ್ಯವಿಲ್ಲ. ಚೀನಾದಂತಹ ಮುಂದುವರಿದ ದೇಶವು, ಭಾರತದ ಮಾನವ ಸಂಪನ್ಮೂಲ ಶಕ್ತಿಯನ್ನು ಅತಿ ಗಂಭೀರವಾಗಿಯೇ ಪರಿಗಣಿಸಿದೆ ಮತ್ತು ಇದರ ಲಾಭವನ್ನು ಪಡೆದುಕೊಳ್ಳುವ ತುದಿಗಾಲ ಮೇಲೆ ನಿಂತಿದೆ.
ಸೈನ್ಸ್ ಟೆಕ್ನಾಲಜಿ, ಎಂಜನಿಯರಿಂಗ್ ಮತ್ತು ಮ್ಯಾಥಮೇಟಿಕ್ಸ್ ವಿಷಯಗಳಲ್ಲಿ ಇಡೀ ದಕ್ಷಿಣ ಏಷ್ಯಾದಲ್ಲಿರುವ ಯುವಸಮುದಾಯವನ್ನು ತನ್ನತ್ತ ಸೆಳೆಯಲು ಚೀನಾ ಭಾರಿ ವ್ಯೂಹವನ್ನು ರಚಿಸಿದ್ದು ಇದು ಮುಂದಿನ ದಿನಗಳಲ್ಲಿ ಅಮೆರಿಕ ಅಂತಹ ದೇಶಕ್ಕೆ ಮುಳುವಾಗಲಿದ್ದು ಭಾರತದಂತಹ ದೇಶಕ್ಕೆ ವರದಾನವಾಗಲಿದೆ. ಇಂದಿನ ಜಾಗತಿಕ ಪ್ರಪಂಚದಲ್ಲಿ ಎಲ್ಲ ದೇಶಗಳೂ ತಮ್ಮದೆ ಆದ ಸರ್ವತೋಮುಖ ಬೆಳವಣಿಗೆಹಯನ್ನು ಬಯಸುವುದು ಸಹಜ. ಯಾವ ದೇಶಕ್ಕೂ ಇಂದು ನೆರೆಹೊರೆಯ ದೇಶಗಳ ಜೊತೆ ಸಾಮಾನ್ಯವಾಗಿ ಅನಗತ್ಯ ಕಲಹ ಬೇಕಿಲ್ಲ. ಆದರೆ ಈ ಮಾತುಗಳು ಪಾಕಿಸ್ಥಾನದಂತಹ ಉಗ್ರರ ಕೃಪೆ ಮತ್ತು ಸೆರೆಯಲ್ಲಿರುವ ದೇಶಕ್ಕೆ ಅನ್ವಯವಾಗುವುದಿಲ್ಲ. ಒಟ್ಟಿನಲ್ಲಿ ಅಮೆರಿಕದ ಕಾಕದೃಷ್ಟಿ ಮತ್ತು ಕುಹಕ ಬುದ್ಧಿಯಿಂದ ಭಾರತದಂತಹ ದೇಶಕ್ಕೆ ಆದ ನಷ್ಟವೇನೂ ಇಲ್ಲ. ಇದರಿಂದ ಭಾರತದ ಸ್ವದೇಶಿ ಉತ್ನನ್ನಗಳ ಸಮರ್ಥ ತಯಾರಿಕೆ ಮತ್ತು ಅವುಗಳ ಸೂಕ್ತ ಮಾರುಕಟ್ಟೆ ಈ ನೆಲದಲ್ಲಿ ನಿರ್ಮಾಣವಾಗುವುದು ಖಚಿತ. ಮಿಗಿಲಾಗಿ ದೇಶದ ಖಾಸಗಿ ಉದ್ಯಮಿಗಳೂ ಇಂದು ದೇಶದ ಯುವ ಪ್ರತಿಭೆ ಮತ್ತು ಸಂಪತ್‌ಭರಿತ ಯುವ ಮಾನವಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳಲು ಸಂಕಲ್ಪ ತೊಟ್ಟಿರುವುದು ಗಮನಾರ್ಹ.