ಜಗತ್ತಿನ ಯಾವ ಮೂಲೆಯಿಂದಾದರೂ ಬೆದರಿಕೆಗಳನ್ನು ಪತ್ತೆ ಹಚ್ಚುವ ಹಾಗೂ ಎದುರಿಸುವ ಸಾಮರ್ಥ್ಯವಿರುವ ಇಡೀ ವಿಶ್ವವನ್ನೇ ತಲುಪಬಲ್ಲ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಚೀನಾ ಅಭಿವೃದ್ಧಿ ಪಡಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ಮೊದಲೇ ಎಚ್ಚರಿಕೆ ಗ್ರಹಿಸಿ ಗುರುತಿಸುವ ಈ ವ್ಯವಸ್ಥೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಸ್ತಾಪಿಸಿದ ಯುನೈಟೆಡ್ ಸ್ಟೇಟ್ಸ್‌ನ ಗೋಲ್ಡನ್ ಡೋಮ್ ಯೋಜನೆಗೆ ಹೋಲಿಸಲಾಗಿದೆ ಎಂದು ದಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ರಕ್ಷಣಾ ವ್ಯವಸ್ಥೆಯು ಇನ್ನೂ ಅಭಿವೃದ್ಧಿಯ ಆರಂಭಿಕ ಹಂತಗಳಲ್ಲಿದೆ, ಆದರೆ ಪ್ರಪಂಚದೆಲ್ಲೆಡೆಯಿಂದ ಚೀನಾದ ಮೇಲೆ ಹಾರಿಸಿದಂತಹ 1,000 ಕ್ಷಿಪಣಿಗಳನ್ನು ಏಕಕಾಲದಲ್ಲಿ ಇದು ಮೇಲ್ವಿಚಾರಣೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ರಕ್ಷಣಾ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮುಂದುವರಿದ ಭಾಗವಾಗಿದೆ ಎಂದು ವರದಿ ತಿಳಿಸಿದೆ.
1983 ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಅವರು ಯುನೈಟೆಡ್ ಸ್ಟೇಟ್ಸ್ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರದ ಪರಮಾಣು ಬಿಕ್ಕಟ್ಟಿನ ಸಮಯದಲ್ಲಿ ‘ಸ್ಟಾರ್ ವಾರ್ಸ್’ ಎಂದು ಪ್ರಸಿದ್ಧವಾದ ‘ಸ್ಟ್ರಾಟೆಜಿಕ್ ಡಿಫೆನ್ಸ್ ಇನಿಶಿಯೇಟಿವ್’ ಘೋಷಿಸಿದ್ದರು. 1983ರ ಮಾರ್ಚ್ 23ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರೇಗನ್, ಅಂತರ್ ಖಂಡಾಂತರ ಕ್ಷಿಪಣಿಗಳು ನಮ್ಮ ತೀರವನ್ನು ತಲುಪುವ ಮೊದಲು ಅವುಗಳನ್ನು ತಡೆದು ನಾಶಪಡಿಸುವ ವ್ಯವಸ್ಥೆಯನ್ನು ಕಲ್ಪಿಸಿ ಕೊಳ್ಳಿ. ನಮ್ಮ ನಗರಗಳು ಮತ್ತು ನಮ್ಮ ಜನರನ್ನು ಪರಮಾಣು ದಾಳಿಯಿಂದ ರಕ್ಷಿಸುವ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಿ ಎಂದು ಹೇಳಿದ್ದರು. ಅದನ್ನೇ ಈಗ ಚೀನಾ ಕಾರ್ಯರೂಪಕ್ಕೆ ತರುತ್ತಿದೆ ಎಂದು ಮಾಧ್ಯಮ ವರದಿ ವಿಶ್ಲೇಷಿಸಿದೆ.
1991 ರಲ್ಲಿ ಸೋವಿಯತ್ ಒಕ್ಕೂಟ ಪತನಗೊಂಡಿತು ಜೊತೆಗೆ ಅಮೆರಿಕ ಅಧ್ಯಕ್ಷ ರೋನಾಲ್ಡ್ ರೇಗನ್ ಚಿಂತನೆಯೂ ಅಲ್ಲಿಗೆ ಮುಚ್ಚಿ ಹೋಗಿತ್ತು. ಹಲವು ದಶಕಗಳ ನಂತರ ಟ್ರಂಪ್ ಆಡಳಿತದಲ್ಲಿ ಈ ಕಲ್ಪನೆ ಮತ್ತೆ ಚಾಲ್ತಿಗೆ ಬಂದಿದೆ. ಮೇ 2025 ರಲ್ಲಿ ಟ್ರಂಪ್ $175 ಬಿಲಿಯನ್ ಡಾಲರ್ ವೆಚ್ಚದಲ್ಲಿ ಬಹುಪದರದ ಕ್ಷಿಪಣಿ ರಕ್ಷಣಾ ಗುರಾಣಿ ‘ಗೋಲ್ಡನ್ ಡೋಮ್’ ಸ್ಥಾಪಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಚೀನಾದ ವಿಜ್ಞಾನಿಗಳು ಈಗಾಗಲೇ ತಮ್ಮ ಜಾಗತಿಕ ಕ್ಷಿಪಣಿ ರಕ್ಷಣಾ ವೇದಿಕೆಯ ಕಾರ್ಯನಿರತ ಮೂಲಮಾದರಿಯನ್ನು ನಿಯೋಜಿಸಿದ್ದಾರೆ. ಇದು ಆಕಾಶ, ಸಮುದ್ರ, ಗಾಳಿ ಮತ್ತು ನೆಲದ ಮೇಲಿನ ಸಂವೇದಕಗಳ ವ್ಯಾಪಕ ಜಾಲವನ್ನು ಬಳಸಿಕೊಂಡು ನೈಜ ಸಮಯದಲ್ಲಿ ಸಂಭಾವ್ಯ ಬೆದರಿಕೆಗಳನ್ನು ಗುರುತಿಸುತ್ತದೆ. ಭೂಮಿಯ ಸಂಪೂರ್ಣ ವ್ಯಾಪ್ತಿಯನ್ನು ಆವರಿಸುವ ಮೊದಲ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ ಎಂದು ಮಾಧ್ಯಮವು ವರದಿಯಲ್ಲಿ ತಿಳಿಸಿದೆ.