ಕೆಮ್ಮಿನ ಸಿರಪ್ ಸೇವಿಸಿ 11 ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ವೈದ್ಯನನ್ನು ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಬಂಧಿಸಲಾಗಿದೆ. ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿಯ ಚಿಕಿತ್ಸಾಲಯದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ವೈದ್ಯ ಕೋಲ್ಡ್ರಿಫ್ ಸಿರಪ್ ನೀಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶ ಸರ್ಕಾರವು ಕೋಲ್ಡ್ರಿಫ್ ಕೆಮ್ಮು ಸಿರಪ್ ತಯಾರಿಸಿದ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿರುವ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ವಿರುದ್ಧವೂ ಪ್ರಕರಣ ದಾಖಲಿಸಿದೆ. ಸರ್ಕಾರವು ಈ ಹಿಂದೆ ಕೋಲ್ಡ್ರಿಫ್ ಮಾರಾಟವನ್ನು ನಿಷೇಧಿಸಿತ್ತು. ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ಪರೀಕ್ಷಿಸಿದ ಸಿರಪ್‌ನ ಮಾದರಿ ಪ್ರಮಾಣಿತ ಗುಣಮಟ್ಟದಲ್ಲಿಲ್ಲ ಎಂದು ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯ ಹೇಳಿದೆ.
ಕೋಲ್ಡ್ರಿಫ್ ಮತ್ತು ಇನ್ನೊಂದು ಕೆಮ್ಮಿನ ಸಿರಪ್ ‘ನೆಕ್ಟ್ರೋ-ಡಿಎಸ್’ ಮಾರಾಟವನ್ನು ಸರ್ಕಾರ ನಿಷೇಧಿಸಿತು. ಕೋಲ್ಡ್ರಿಫ್‌ನ ಪರೀಕ್ಷಾ ವರದಿ ಬಂದಿದ್ದು, ನೆಕ್ಸ್ಟ್ರಾ-ಡಿಎಸ್‌ನ ವರದಿ ಇನ್ನು ಬರಬೇಕಿದೆ. ಮಕ್ಕಳು ಶೀತ, ಜ್ವರದ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೆಮ್ಮಿನ ಸಿರಪ್ ಸೇರಿದಂತೆ ನಿಯಮಿತ ಔಷಧಿ ಶಿಫಾರಸು ಮಾಡಲಾಗಿತ್ತು. ಅದನ್ನು ಸೇವಿಸಿ ಮಕ್ಕಳ ಆರೋಗ್ಯ ಲ್ಲಿ ಚೇತರಿಕೆ ಕಂಡಿತ್ತು. ಕೆಲವೇ ದಿನಗಳಲ್ಲಿ ಮತ್ತೆ ಕೆಮ್ಮು ಉಲ್ಬಣಗೊಂಡು ಮೂತ್ರಪಿಂಡದಲ್ಲಿ ಸೋಂಕು ಕಾಣಿಸಿಕೊಂಡು ಮಕ್ಕಳು ಅಸು ನೀಗಿವೆ ಎಂದು ಸಂತ್ರಸ್ತ ಕುಟುಂಬಗಳು ಹೇಳಿಕೊಂಡಿವೆ
ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ಈ ಸಾವುಗಳಿಗೆ ಸಂಬಂಧಿಸಿದಂತೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.