ಮೈಸೂರು ರೈಲು ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಅಪಹರಣ ಮಾಡಲು ವೃದ್ಧ ಮಹಿಳೆಯೊಬ್ಬರು ಯತ್ನಿಸಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾರೆ, ಮಗುವನ್ನು ಕೂಡ ಪೊಲೀಸರು ಸುರಕ್ಷಿತವಾಗಿ ಕುಟುಂಬಕ್ಕೆ ಒಪ್ಪಿಸಿದ್ದಾರೆ.
50 ವರ್ಷದ ಆರೋಪಿ ವೃದ್ಧೆಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರು ಬಂಧಿಸಿದ್ದಾರೆ. ಮೈಸೂರು ರೈಲ್ವೆ ನಿಲ್ದಾಣದ ವೇಟಿಂಗ್ ರೂಮ್‌ನಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಆಕೆ ಎತ್ತಿಕೊಂಡು ಹೋಗಲು ಯತ್ನಿಸಿದ್ದಾರೆ.
ಎಚ್ಚರಗೊಂಡ ತಾಯಿಗೆ ಮಗು ನಾಪತ್ತೆಯಾಗಿರುವುದು ಗೊತ್ತಾಗಿ ಕೂಡಲೇ ಕುಟುಂಬಸ್ಥರೊಂದಿಗೆ ಆರ್‌ಪಿಎಫ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಆರ್‌ಪಿಎಫ್ ಪೊಲೀಸರು, ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ದಾಗ ವೃದ್ಧೆ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಇದನ್ನು ಅನುಸರಿಸಿ ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿ, ಮಗುವನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಕುಟುಂಬಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಾಸನ ಮೂಲದ ನಂದಿನಿ ಎಂದು ಗುರುತಿಸಲಾಗಿದೆ. ಆರ್‌ಪಿಎಫ್ ಪೊಲೀಸರು ಆರೋಪಿಯ ವಿರುದ್ಧ ಅಪಹರಣ ಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.