Menu

ಚಿಕ್ಕಮಗಳೂರು ಏರ್-ಸ್ಟ್ರಿಪ್ ನಿರ್ಮಾಣ: ಸಂಪುಟ ಸಭೆಗೆ ಕಡತ ಮಂಡಿಸಲು ಸೂಚನೆ

ಬೆಂಗಳೂರು: ಪ್ರವಾಸೋದ್ಯಮ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಉತ್ತೇಜನ ನೀಡಲು ಚಿಕ್ಕಮಗಳೂರಿನಲ್ಲಿ ಏರ್-ಸ್ಟ್ರಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರದ ಬಾಬ್ತಿನ 17.06 ಕೋಟಿ ರೂ.ಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವ ಉದ್ದೇಶದಿಂದ ಈ ಯೋಜನೆಯ ಪ್ರಸ್ತಾವನೆಯನ್ನು ಮುಂಬರುವ ಸಚಿವ ಸಂಪುಟ ಸಭೆಗೆ ಮಂಡಿಸಲು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

2023-24ರ ಬಜೆಟ್ ನಲ್ಲಿ ಘೋಷಿಸಿದ್ದ ಚಿಕ್ಕಮಗಳೂರು ಮತ್ತು ಕೊಡಗು ಏರ್-ಸ್ಟ್ರಿಪ್ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಅವರು ಮತ್ತು ಇಂಧನ ಸಚಿವರೂ ಆದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಅವರ ಜತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಗುರುವಾರ ವಿಧಾನಸೌಧದಲ್ಲಿ ಸಭೆ ನಡೆಸಿ, ಸೂಕ್ತ ಆದೇಶ ನೀಡಿದರು.

ಚಿಕ್ಕಮಗಳೂರು ಏರ್-ಸ್ಟ್ರಿಪ್ ಯೋಜನೆಗೆ ಅಲ್ಲಿನ ಜಿಲ್ಲಾಡಳಿತವು ಚಿಕ್ಕಮಗಳೂರು-ಹಿರೇಮಗಳೂರು ನಡುವೆ ಈಗಾಗಲೇ 137 ಎಕರೆ ಜಮೀನು ನೀಡಿದೆ. ಈ ಪೈಕಿ 120 ಎಕರೆ ಸರಕಾರಿ ಜಮೀನೇ ಆಗಿದೆ. ಉಳಿದ 17.1 ಎಕರೆ ಮಾತ್ರ ಖಾಸಗಿಯಾಗಿದ್ದು, ಇದರ ಸ್ವಾಧೀನ ಬಾಕಿ ಇದೆ. ಇದಕ್ಕೆ 24.6 ಕೋಟಿ ರೂ. ವೆಚ್ಚವಾಗಲಿದ್ದು, ಈಗಾಗಲೇ 7 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಉಳಿದಿರುವ 17.6 ಕೋಟಿ ರೂ.ಗಳ ಬಿಡುಗಡೆ ಬಾಕಿ ಇದೆ ಎಂದು ಪಾಟೀಲ ವಿವರಿಸಿದ್ದಾರೆ.

ಇದು ಸರಕಾರದ ಮುಂದೆ ಬಂದಿದ್ದು, ಬಳಿಕ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಬಾಕಿ ಹಣ ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು. ಇಲ್ಲಿಂದ ಈ ವಿಚಾರವು ಹಣಕಾಸು ಇಲಾಖೆಗೆ ಹೋಗಿದೆ. ಅಲ್ಲಿಂದ ಸಂಪುಟ ಸಭೆಯ ಮುಂದೆ ಬರಬೇಕಾಗಿದೆ. ಹೀಗಾಗಿ ಕೂಡಲೇ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಇಬ್ಬರೂ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಉದ್ದೇಶಿತ ಏರ್-ಸ್ಟ್ರಿಪ್ ನಲ್ಲೇ ಹೆಲಿಪೋರ್ಟ್ ಕೂಡ ಅಭಿವೃದ್ಧಿಪಡಿಸಲಾಗುವುದು. ಜತೆಗೆ ಮುಂಬರುವ ದಿನಗಳಲ್ಲಿ ಬೃಹತ್ ವಿಮಾನಗಳ ಪ್ರಯಾಣಕ್ಕೂ ಅನುಕೂಲವಾಗುವ ಹಾಗೆ ನಿಲ್ದಾಣ ಅಭಿವೃದ್ಧಿ ಪಡಿಸುವ ಉದ್ದೇಶ ಇಟ್ಟುಕೊಳ್ಳಬೇಕು. ಪೂರಕವಾಗಿ ಅಕ್ಕಪಕ್ಕದ ಜಮೀನು ಗುರುತಿಸುವುದು. ಮುಂದಿನ ದಿನಗಳಲ್ಲಿ ಇದನ್ನು ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು. ಇದಕ್ಕೆ ಕೆಎಸ್ಐಐಡಿಸಿ ವತಿಯಿಂದ ಪರಿಣತರ ತಂಡವನ್ನು ಕಳಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಇದೇ ರೀತಿಯಲ್ಲಿ ಕೊಡಗಿನಲ್ಲಿ ಏರ್-ಸ್ಟ್ರಿಪ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮಸ್ಯೆ ತಲೆದೋರಿದೆ. ಇದನ್ನು ಆದಷ್ಟು ಬೇಗ ಬಗೆಹರಿಸಿ, ಜಾಗವನ್ನು ಗುರುತಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್ ಮಂಜುಳಾ, ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಡಾ.ಮಹೇಶ ಅವರು ಸಭೆಯಲ್ಲಿ ಹಾಜರಿದ್ದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ವರ್ಚುಯಲ್ ರೂಪದಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *