ಮಂಗಳೂರಿನ ಜೈಲಿನಲ್ಲಿ ನೆಟ್ವರ್ಕ್ ಜಾಮರ್ ಅಳವಡಿಸಿರುವುದರಿಂದ ವೈದ್ಯರ ಸಂಪರ್ಕ ಸಾಧ್ಯವಾಗದೆ ಚಿಕ್ಕಮಗಳೂರಿನ ರೋಗಿ ಸಾವು ಬದುಕಿನ ನಡುವೆ ಹೋರಾಡಬೇಕಾಯಿತು.
ಜೈಲಿನಲ್ಲಿ ಜಾಮರ್ ಅಳವಡಿಕೆಯಿಂದ ಮಂಗಳೂರಿನ ಹೃದಯ ಭಾಗ ಕೊಡಿಯಾಲಬೈಲ್ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಮಂಗಳೂರಿನ ಖ್ಯಾತ ಹೃದಯ ತಜ್ಞ ಪದ್ಮನಾಭ ಕಾಮತ್ ಅವರಿಗೆ ಎಷ್ಟು ಬಾರಿ ಕರೆ ಮಾಡಿದರೂ ಜಾಮರ್ ಕಾರಣ ಸಂಪರ್ಕಕ್ಕೆ ಸಿಗಲೇ ಇಲ್ಲ. ಇದರಿಂದಾಗಿ ರೋಗಿ ಸಾವು ಬದುಕಿನ ಹೋರಾಟ ನಡೆಸುವಂತಾಗಿ ಕುಟುಂಬ ಕಂಗಾಲಾಗಿತ್ತು.
ಮಂಗಳೂರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಡಾ ಪದ್ಮನಾಭ ಕಾಮತ್ ಅವರ ಸಂಪರ್ಕ ಸಾಧ್ಯವಾಗಲೇ ಇಲ್ಲ. ಆಸ್ಪತ್ರೆಯ ಸಿಬ್ಬಂದಿಗೂ ವೈದ್ಯರ ಸಂಪರ್ಕ ಸಾಧ್ಯವಾಗಲಿಲ್ಲ. ಕೊನೆಗೆ ಆಸ್ಪತ್ರೆಯಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿ ವೈದ್ಯರ ಮನೆಗೆ ಹೋಗಿ ಮಾಹಿತಿ ನೀಡಿದಾಗ ಕೂಡಲೇ ಆಸ್ಪತ್ರೆಗೆ ಧಾವಿಸಿದ ಡಾ. ಪದ್ಮನಾಭ ಕಾಮತ್ ಅವರಿಂದ ರೋಗಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಯಿತು.
ವೈದ್ಯಕೀಯ ವಿದ್ಯಾರ್ಥಿಯ ಸಮಯ ಪ್ರಜ್ಞೆಯಿಂದ ರೋಗಿಯ ಪ್ರಾಣ ಉಳಿಯಿತು, ಆದರೆ ಮುಂದೆ ರೋಗಿಗಳಿಗೆ ಇಂತಹ ಪರಿಸ್ಥಿತಿ ಬಾರದಂತೆ ಕ್ರಮಕ್ಕೆ ಆಗ್ರಹ ಡಾ ಕಾಮತ್ ಆಗ್ರಹಿಸಿದ್ದಾರೆ.
ಜಿಲ್ಲೆ ಹಾಗೂ ಹೊರ ಜಿಲ್ಲೆಯ ಹಳ್ಳಿಗಳಿಗೆ ಉಚಿತ ಇಸಿಜಿ ಕಿಟ್ ನೀಡಿರುವ ಹೃದಯ ತಜ್ಞ ಪದ್ಮನಾಭ ಕಾಮತ್, ಹಳ್ಳಿಗಳಿಂದ ಇಸಿಜಿ ರಿಪೋರ್ಟ್ ಪೋಟೋ ಕಳುಹಿಸಿದಾಗ ಪರಿಹಾರ ತಿಳಿಸುತ್ತಿದ್ದರು.