ನಾಲ್ಕು ವರ್ಷದ ಹಿಂದೆ 110 ಗ್ರಾಂ ಚಿನ್ನ ನೀಡಿ ಅದ್ಧೂರಿಯಾಗಿ ಮಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟರೂ ವರದಕ್ಷಿಣೆ ಕಿರುಕುಳ ನೀಡಿ ಗಂಡನ ಮನೆಯವರೇ ಮಗಳ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ನಾಟಕವಾಡಿ ಕೊಂದಿರುವುದಾಗಿ ಚಿಕ್ಕಮಗಳೂರಿನ ಪೋಷಕರು ಆರೋಪಿಸಿದ್ದಾರೆ.
ಗಂಡನ ಮನೆಯವರು ಹೆಂಡತಿ ಶವ ಆಸ್ಪತ್ರೆಯಲ್ಲಿ ಬಿಟ್ಟು ಮಗುವನ್ನು ಕಿಡ್ನಾಪ್ ಮಾಡಿಕೊಂಡು ಪರಾರಿ ಆಗಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ದೂರು ನೀಡಿದ್ದಾರೆ. ಮಮತಾ ಮೃತ ಮಹಿಳೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದೆ.
ಮದುವೆ ವೇಳೆ 110 ಗ್ರಾಂ ಚಿನ್ನ ನೀಡಿ ಮದುವೆ ಮಾಡಿದ್ದರೂ ಹಣಕ್ಕಾಗಿ ಗಂಡನ ಮನೆಯವರು ಕಿರುಕುಳ ನೀಡಿದ್ದಾರೆ. ಹಿಂಸೆ ತಾಳಲಾರದೆ ಮಮತಾ ಗಂಡನ ಮನೆ ಬಿಟ್ಟು ತವರು ಸೇರಿದ್ದಳು. ರಾಜಿ-ಪಂಚಾಯಿತಿ ಮೂಲಕ ಮತ್ತೆ ಗಂಡನ ಮನೆಗೆ ಕಳಿಸಲಾಗಿತ್ತು. ಕಳೆದ ವರ್ಷವೂ ಮಗಳ ಗಂಡ ಅವಿನಾಶ್ ನಮ್ಮಿಂದ 50 ಸಾವಿರ ರೂ. ಪಡೆದುಕೊಂಡಿದ್ದ. ಇತ್ತೀಚೆಗೆ ಮಮತಾಗೆ ಪಿಟ್ಸ್ ಬಂದಿದೆ ಎಂದು ಆಸ್ಪತ್ರೆಗೆ ಸೇರಿಸಿದ್ದ. ಇದಾದ ನಂತರ ನಾವು 2 ತಿಂಗಳಿಂದ ಚಿಕ್ಕಮಗಳೂರಿನ ಫಾದರ್ ಮುಲ್ಲರ್, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ಮಮತಾ ಹುಷಾರಾಗುವ ಮುನ್ನವೇ ಗಂಡನ ಮನೆಯವರು ಮನೆಗೆ ಕರೆತಂದಿದ್ದಾಗಿ ಪೋಷಕರು ತಿಳಿಸಿದ್ದಾರೆ.
ಮತ್ತೊಂದೆಡೆ ಅವಿನಾಶ್ ಚಿಕ್ಕಪ್ಪ ಮಮತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಮಾಹಿತಿ ನೀಡಿದ್ದರೆ, ಗಂಡನ ಮನೆಯವರು ಹೊಡೆದು ನೇಣು ಹಾಕಿ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಮಮತಾಳ ಗಂಡ, ಅತ್ತೆ-ಮಾವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಣ್ಣ ಮಂಜುನಾಥ್ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆ ಮುಂದೆ ಮೃತಳ ಪೋಷಕರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಆಕೆಯ 2 ವರ್ಷದ ಮಗುವನ್ನು ಅಮ್ಮನ ಮುಖ ನೋಡಲು ವಾಪಸ್ ಕರೆದುಕೊಂಡು ಬರಬೇಕು. ಅಲ್ಲಿವರೆಗೂ ಆಸ್ಪತ್ರೆಯಿಂದ ಶವ ತೆಗೆಯಲು ಬಿಡುವುದಿಲ್ಲ ಎಂದು ಪೋಷಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮುಂದುವರಿಸಿದ್ದಾರೆ.