ಹೈದರಾಬಾದ್‌ನ ಉದ್ಯಮಿಯೊಬ್ಬರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿಕ್ಕಬಳ್ಳಾಪುರದಲ್ಲಿ 55 ಲಕ್ಷ ರೂಪಾಯಿ ಇದ್ದ ಅವರ ಹಣದ ಬ್ಯಾಗ್ ಅನ್ನು ಕಳ್ಳ ದೋಚಿಕೊಂಡು ಹೋಗಿದ್ದಾನೆ.
ಉದ್ಯಮಿ ಬೆಂಗಳೂರಿನಲ್ಲಿ ಮನೆ ಮಾರಾಟ ಮಾಡಿದ್ದು, ಅದರಿಂದ ಬಂದ ಹಣವನ್ನು ಬಸ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ. ನಕಲಿ ನಂಬರ್ ಪ್ಲೇಟ್ ಕಾರು ಬಳಸಿ ಕಳ್ಳ ಈ ಕೃತ್ಯ ಎಸಗಿದ್ದಾನೆ.
ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಪ್ರಯಾಣಿಕರ ಊಟಕ್ಕೆಂದು ನಿಲ್ಲಿಸಲಾಗಿತ್ತು. ಊಟಕ್ಕೆಂದು ಕೆಳಗೆ ಇಳಿದು ಹೋಗಿದ್ದ ವೇಳೆ ಸೀಟ್ನಲ್ಲಿ ಇಟ್ಟಿದ್ದ ಹಣದ ಬ್ಯಾಗ್ ನಾಪತ್ತೆಯಾಗಿದೆ. ಈ ಹಣದ ಬ್ಯಾಗ್ ಹೈದರಾಬಾದ್ ಉದ್ಯಮಿ ಕೆ.ವೆಂಕಟೇಶ್ವರ ರಾವ್ಗೆ ಸೇರಿದ್ದು, ಬೆಂಗಳೂರಿನಲ್ಲಿದ್ದ ಮನೆ ಮಾರಾಟದಿಂದ ಬಂದಿದ್ದ ನಗದನ್ನು ಅವರು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.
ಟಾಟಾ ಇಂಡಿಕಾ ಕಾರಿನಲ್ಲಿ ಬಂದಿದ್ದ ವ್ಯಕ್ತಿ ಹಣ ದೋಚಿದ್ದಾನೆ ಎಂದು ಬಸ್ನಲ್ಲಿದ್ದ ಇತರ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಕಾರಿನಿಂದ ಇಳಿದು ನೇರವಾಗಿ ಬಸ್ನೊಳಗೆ ನುಗ್ಗಿದ್ದ ವ್ಯಕ್ತಿ ಸೀಟ್ ನಂ.4ರಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ.
ಪೆರೇಸಂದ್ರ ಠಾಣೆಗೆ ಉದ್ಯಮಿ ಕೆ.ವೆಂಕಟೇಶ್ವರ ರಾವ್ ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಆರೋಪಿ ಪರಾರಿಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.


