Menu

ಮುಖ್ಯಮಂತ್ರಿ ಸ್ಥಾನ: ಸಿಎಂ ಹೇಳಿದ ಮೇಲೆ ಇನ್ನೇನಿದೆ ಎಂದ ಡಿಕೆ ಶಿವಕುಮಾರ್

“ಸಿಎಂ  ಹೇಳಿದ ಮೇಲೆ ಮುಗಿಯಿತು. ಅವರು ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು  ಪ್ರತಿಕ್ರಿಯಿಸಿದರು. “ಹೈಕಮಾಂಡ್ ಒಪ್ಪಿದರೇ ನಾನೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತೇನೆ” ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದರು.

ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯೆಯಾದ ಅಂಬಿಕಾ ಸೋನಿಯವರ ಮನೆಗೆ ಭೇಟಿ ನೀಡಿದ್ದೆ. ಅವರ ಪತಿ ತೀರಿಕೊಂಡಿದ್ದರು. ಹೀಗಾಗಿ ಸಂತಾಪ ಸೂಚಿಸಲು ಅವರ ಮನೆಗೆ ಭೇಟಿ ನೀಡಿದ್ದೆ. ನಾನು ತಿಹಾರ್ ಜೈಲಿನಲ್ಲಿದ್ದಾಗ ಅವರು ಸೋನಿಯಗಾಂಧಿ ಅವರ ಜೊತೆ ಬಂದು ನನ್ನನ್ನು ಭೇಟಿ ಮಾಡಿದ್ದರು. ನನಗೂ ಅವರಿಗೂ ಬಹಳ ಆತ್ಮೀಯತೆ. ನಮ್ಮ ಪಕ್ಷದ ನಾಯಕರು ಅವರು. ಎಸ್.ಎಂ.ಕೃಷ್ಣ ಅವರು ಅಧಿಕಾರದಲ್ಲಿದ್ದಾಗ ನಮಗೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನನ್ನನ್ನು ತಮ್ಮನಂತೆ ಕಂಡಿದ್ದರು, ನನ್ನ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹಾಗಾಗಿ ನಾನು ಅವರ ಮನೆಗೆ ಭೇಟಿ ನೀಡಿದ್ದೆ” ಎಂದು ತಿಳಿಸಿದರು.

ನೀವು ಹೈಕಮಾಂಡ್ ಭೇಟಿಗೆ ದಿಲ್ಲಿಗೆ ಹೋಗಿದ್ದಿರಿ ಎಂದು ಚರ್ಚೆಯಾಗುತ್ತಿದೆಯಲ್ಲ ಎಂದು ಕೇಳಿದಾಗ, “ನಾನು ದಿಲ್ಲಿಗೆ ಹೋಗಿದ್ದ ವಿಷಯ, ಕೆಲಸದ ಬಗ್ಗೆ ಮಾತ್ರ ಹೇಳಬಲ್ಲೆ. ಹೈಕಮಾಂಡ್ ಭೇಟಿ ಬಗ್ಗೆ ನೀವು ಮಾಧ್ಯಮದವರು, ಸಾರ್ವಜನಿಕರು, ಇನ್ನೂ ಬೇರೆಯವರು ಏನು ಬೇಕಾದರೂ ಚರ್ಚೆ ಮಾಡಿಕೊಳ್ಳಿ. ಯಾರು ಬೇಕಾದರೂ ಮಾತಾಡಿಕೊಳ್ಳಲಿ. ನನಗದು ಸಂಬಂಧ ಪಡದ ವಿಷಯ” ಎಂದರು.

Related Posts

Leave a Reply

Your email address will not be published. Required fields are marked *