ನಾನು ಅದೃಷ್ಟವಂತ ಅದಕ್ಕೆ ಸಿಎಂ ಆಗಿದ್ದೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಿ.ಆರ್.ಪಾಟೀಲ್ ಸಿದ್ದರಾಮಯ್ಯರವರು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಬಿ.ಆರ್.ಪಾಟೀಲ್ ಹಾಗೂ ನಾನು ಒಟ್ಟಿಗೆ ರೈತ ಹೋರಾಟದ ಮೂಲಕ ರಾಜಕೀಯಕ್ಕೆ ಬಂದವರು. ನನಗೆ ನಂಜುಂಡಸ್ವಾಮಿ ಅವರ ಮಾರ್ಗದರ್ಶನ ಇತ್ತು ಎಂದು ಅವರು ಹೇಳಿದರು.
ಬಿಆರ್ ಪಾಟೀಲ್ ಮತ್ತು ನಾನು ಒಂದೇ ಸಲ ಶಾಸಕರಾಗಿದ್ದರಿಂದ ಹಾಗೂ ನನಗೆ ಮುಖ್ಯಮಂತ್ರಿಯಾಗಲು ಅವಕಾಶ ದೊರೆತಿದ್ದರಿಂದ ಬಿ.ಆರ್.ಪಾಟೀಲ್ ಈ ರೀತಿ ಹೇಳಿಕೆ ನೀಡಿರಬಹುದು. ನಾನು ಸಿಎಂ ಆದೆ. ಅವರು ಹಾಗೆ ಇದ್ದಾರೆ ಅಂದರೆ ಅದಕ್ಕೆ ನಾನೇನು ಹೇಳಲಿ ಎಂದು ಅವರು ಪ್ರತಿಕ್ರಿಯಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ,ಕೇಂದ್ರ ಆಡಳಿತ ನ್ಯಾಯಮಂಡಳಿಯ ಐಪಿಎಸ್ ಅಧಿಕಾರಿಗಳ ಅಮಾನತ್ತು ಆದೇಶವನ್ನು ರದ್ದು ಮಾಡಿರುವ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಾತಿಗಣತಿ ವಿವರವನ್ನು ಆನ್ ಲೈನ್ ನಲ್ಲಿಯೂ ಸಲ್ಲಿಸುವ ವ್ಯವಸ್ಥೆಯಿದೆ
ಜಾತಿಗಣತಿ ನಡೆಸಲಾಗಿದೆ ಎಂಬ ಪೋಸ್ಟರ್ ಗಳನ್ನು ಮನೆಗಳಿಗೆ ಭೇಟಿ ನೀಡದೇ, ಮನೆಯ ಮುಂದೆ ಅಂಟಿಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಜಾತಿಗಣತಿಯನ್ನು ನಡೆಸಲು ಹಲವು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕವೂ ಜಾತಿವಿವರಗಳನ್ನು ನೀಡಬಹುದು ಅಥವಾ ಮನೆಗಳಿಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದು. ಈ ಬಗ್ಗೆ ಸತ್ಯಾಸತ್ಯತೆ ತಿಳಿದು ಮಾಧ್ಯಮದವರು ಪ್ರಶ್ನಿಸಬೇಕು ಎಂದರು.