ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ದಿಂದ ದುಬೈಗೆ ತೆರಳುತ್ತಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರ ಲಗೇಜ್ ಬ್ಯಾಗ್‌ನಲ್ಲಿದ್ದ ಚಿನ್ನ ಮತ್ತು ವಜ್ರಾಭರಣಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಏರ್ಪೋರ್ಟ್ ಪೊಲೀಸ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹುಬ್ಬಳ್ಳಿ ಮೂಲದ ಈ ಮಹಿಳೆ ಕಳೆದ ನವೆಂಬರ್ ತಿಂಗಳಲ್ಲಿ ದುಬೈ ಮೂಲಕ ಅಮೆರಿಕಕ್ಕೆ ವಿಮಾನದಲ್ಲಿ ಪ್ರಯಾಣಿಸಿದ್ದರು. ಇತ್ತೀಚೆಗೆ ರಾಜ್ಯಕ್ಕೆ ವಾಪಸ್ ಆಗಿದ್ದು, ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದಾರೆ. ಚೆಕ್-ಇನ್ ವೇಳೆ ಲಗೇಜ್ ಬ್ಯಾಗ್‌ನೊಳಗೆ ಚಿನ್ನಾಭರಣ ಇರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿಗೆ ತೋರಿಸಿ, ನಿಯಮಾನುಸಾರ ಬ್ಯಾಗ್‌ಗೆ ಟ್ಯಾಗ್ ಮಾಡಿಸಿದ್ದರು. ಆ ಬ್ಯಾಗ್ ಅನ್ನು ವಿಮಾನದ ಲಗೇಜ್ ವಿಭಾಗಕ್ಕೆ ಕಳುಹಿಸಲಾಗಿತ್ತು. ದುಬೈ ತಲುಪಿದ ಬಳಿಕ ಬ್ಯಾಗ್ ಪರಿಶೀಲನೆ ನಡೆಸಿ ದಾಗ ಅದರೊಳಗೆ ಇರಿಸಿದ್ದ ಚಿನ್ನ ಮತ್ತು ವಜ್ರಾಭರಣಗಳು ಕಾಣೆಯಾಗಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
790 ಗ್ರಾಂ ಚಿನ್ನಾಭರಣ ಹಾಗೂ 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣ ನಾಪತ್ತೆಯಾಗಿವೆ. ಚೆಕ್-ಇನ್ ನಂತರ ಲಗೇಜ್ ವಿಮಾನಕ್ಕೆ ಸೇರಿಸುವ ಮಧ್ಯೆ ಕಳ್ಳತನ ನಡೆದಿರುವ ಸಾಧ್ಯತೆ ಹೆಚ್ಚಿರುವುದರಿಂದ, ವಿಮಾನ ನಿಲ್ದಾಣದ ಸಿಬ್ಬಂದಿಯಿಂದಲೇ ಚಿನ್ನಾಭರಣ ಕಳ್ಳತನವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.


