ಬೆಳಗಾವಿ: ಬಗರ್ ಹುಕುಂ ಫಾರ್ಮ್ 50-53 ರಲ್ಲಿ ಜಮೀನು ಮಂಜೂರು ಪ್ರಕರಣಗಳಲ್ಲಿ ಪ್ರಾಮಾಣಿಕರು ಹಾಗೂ ಅಮಾಯಕರಿಗೆ ತೊಂದರೆ ನೀಡಲ್ಲ. ಆದರೆ, ಅಕ್ರಮವಾಗಿ ಭೂ ಮಂಜೂರಾತಿ ಪಡೆದ ಲೂಟಿ ಕೋರರು ಹಾಗೂ ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸದನಕ್ಕೆ ತಿಳಿಸಿದರು.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಅವರು ಮಾತನಾಡಿ, “ಬಗರ್ ಹುಕುಂ ಫಾರ್ಮ್ 50-53ರ ಅಡಿಯಲ್ಲಿ ಹತ್ತಾರು ವರ್ಷಗಳ ಹಿಂದೆಯೇ ಬಡ ರೈತರಿಗೆ ಜಮೀನು ಮಂಜೂರಾಗಿದೆ. ರೈತರು ಆ ಜಮೀನಿನ ಮೇಲೆ ಸಾಲವನ್ನೂ ಸಹ ಪಡೆದಿದ್ದಾರೆ. ಆದರೆ, ಈಗ ಆ ಮಂಜೂರಾತಿಗಳನ್ನು ರದ್ದು ಮಾಡಿದರೆ ಕಡೂರು, ಮೂಡಿಗೆರೆ ಭಾಗದ ಬಡವರು, ರೈತರು ಬೀದಿಗೆ ಬೀಳುವ ಸ್ಥಿತಿ ಎದುರಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಸಕರಾದ ಎಚ್.ಡಿ. ತಮ್ಮಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಈ ವಿಚಾರದಲ್ಲಿ ಅಮಾಯಕರಿಗೆ ಹಾಗೂ ಪ್ರಾಮಾಣಿಕರಿಗೆ ತೊದರೆ ಮಾಡಲ್ಲ. ಯಾರು ಹಗರಣ ಮಾಡಿದ್ದಾರೆ, ಅಧಿಕಾರಿಗಳ ಜೊತೆ ಶಾಮೀಲಾಗಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಅವರು ಪಾಪದವರಲ್ಲ. ಅಂತವರಿಗೆ ವಿನಾಯಿತಿ ನೀಡುವಷ್ಟು ನಾವು ಉದಾರಿಗಳಲ್ಲ” ಎಂದರು.
ಈ ಹಿಂದೆ ಬಗರ್ ಹುಕುಂ ಭೂ ಮಂಜೂರಾತಿ ಪ್ರಕರಣಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ಸದನಕ್ಕೆ ಮಾಹಿತಿ ನೀಡಿದ ಅವರು, “ನಮ್ಮ ಅಧಿಕಾರಿಗಳು ಭೂಮಿಗಾಗಿ ಅರ್ಜಿ ಕೊಡದವರು, ಸಾಗುವಳಿದಾರರಲ್ಲದವರಿಗೂ ಭೂ ಮಂಜೂರು ಮಾಡಿದ್ದಾರೆ. ಅರಣ್ಯ ಜಾಗದಲ್ಲಿ ಭೂ ಮಂಜೂರು ಮಾಡಿದ್ದಾರೆ. ಅಷ್ಟೇ ಏಕೆ ತುಮಕೂರಿನ ವ್ಯಕ್ತಿಗೆ ಚಿಕ್ಕಮಗಳೂರಿನಲ್ಲಿ ಭೂ ಮಂಜೂರು ಮಾಡಲಾಗಿದೆ. ಅಂದಾಜಿನ ಪ್ರಕಾರ ಕಡೂರು ತಾಲೂಕು ಒಂದರಲ್ಲೇ ಸುಮಾರು 6000 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿ ಖಾತೆ ಮಾಡಿಕೊಡಲಾಗಿದೆ” ಎಂದರು.
ಅಕ್ರಮದಲ್ಲಿ ಬಾಗಿ ಆಗಿ ಲೂಟಿ ಮಾಡಿದವರ ವಿರುದ್ಧ ನಾವು ಉದಾರತೆ ಮೆರೆಯಲು ಸಧ್ಯವಿಲ್ಲ. ತಪ್ಪು ಮಾಡಿದವರು ಅಮಾಯಕರಲ್ಲ. ಇಂತಹ ಅಕ್ರಮಗಳಲ್ಲಿ ಭಾಗಿಯಾದ 24 ಅಧಿಕಾರಿಗಳ ವಿರುದ್ಧ ಈಗಾಗಲೇ ದೋಷಾರೋಪ ಪಟ್ಟಿ ಸಿದ್ದ ಮಾಡಿದ್ದೇನೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಹೀಗಾಗಿ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಒಂದು ಕಾನೂನು ಹಾಗೂ ಅವರ ಜೊತೆ ಶಾಮೀಲಾದ ಭೂ ಕಬಳಿಕೆದಾರರಿಗೆ ಒಂದು ಕಾನೂನು ಮಾಡಲಾಗದು” ಎಂದು ಸ್ಪಷ್ಟಪಡಿಸಿದರು.
ಸದನಕ್ಕೆ ಮತ್ತೊಮ್ಮೆ ಭರವಸೆ ನೀಡಿದ ಅವರು, “ನಾವು ಅಮಾಯಕರ, ಪ್ರಮಾಣಿಕರ ಪರ ಇದ್ದೇವೆ. ಹೀಗಾಗಿ, ಭೂ ಮಂಜೂರಾತಿ ವಿಚಾರದಲ್ಲಿ ತಪ್ಪು ಮಾಡದವರ ಹೆಸರು ದೋಷಾರೋಪ ಪಟ್ಟಿಯಲ್ಲಿ ಬಂದಿದ್ದರೆ, ಅಮಾಯಕರ ಮಂಜೂರು ರದ್ದಾಗಿದ್ದರೆ ಆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತಾಡಿ ಸರಿಪಡಿಸುತ್ತೇನೆ. ಆದರೆ, ಅಕ್ರಮದಲ್ಲಿ ಭಾಗಿಯಾದ ಲೂಟಿಕೋರರಿಗೆ ಉದಾರತೆ ತೋರಿಸಲಾಗದು” ಎಂದು ಅವರು ಸದನಕ್ಕೆ ತಿಳಿಸಿದರು.


