ತುಮಕೂರಿನಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣ ಹೆಸರು ಬದಲಿಸುವ ದುಸ್ಸಾಹಸಕ್ಕೆ ಕೈ ಹಾಕಿ ರಾಜ್ಯ ಸರ್ಕಾರ ಪರಮೇಶ್ವರ ಹೆಸರು ಇಡುತ್ತಿರುವುದು ಅಕ್ಷಮ್ಯ ಅಪರಾಧ, ಕಾಂಗ್ರೆಸ್ ನ ಒಂದು ಮುಖವಾಡ ಕಳಚಿ ಬಿದ್ದಿದೆ. ಕರ್ನಾಟಕದಲ್ಲಿ ರಾಜಿವ್ ಗಾಂಧಿ ಯುನಿವರ್ಸಿಟಿ, ಸಂಜಯ ಗಾಂಧಿ ಆಸ್ಪತ್ರೆಗೆ ಮಹಾತ್ಮಾಗಾಂಧಿ ಹೆಸರಿಡಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮನರೇಗಾ ಹೆಸರು ಬದಲಿಸಿರುವುದಕ್ಕೆ ಕಾಂಗ್ರೆಸ್ ನವರು ದೊಡ್ಡದಾಗಿ ವಿರೋಧ ಮಾಡಿದ್ದಾರೆ. ಅವರು ಮಾತಾಡವುದೊಂದು ಮಾಡೊದಂದು ಇಷ್ಟೆಲ್ಲ ನಡೆಯುತ್ತಿರುವ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಹೆಸರು ಬದಲಿಸಿ ದುಸ್ಸಾಹಸ ಮಾಡಿರುವುದು ಗಾಂಧಿಗೆ ಮಾಡಿರುವ ಅಪಮಾನ. ಪರಮೇಶ್ವರ ಅವರು ತಮ್ಮ ಕಾಲೇಜಿನ ಯಾವುದಾದರೂ ಗ್ರೌಂಡ್ ಗೆ ತಮ್ಮ ಹೆಸರು ಇಡಬೇಕಿತ್ತು. ನಮ್ಮ ಕಾಲದಲ್ಲಿ ತುಮಕೂರು ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಮಾಡಿದ್ದೇವೆ. ನಾನೇ ಉದ್ಘಾಟನೆ ಮಾಡಿದ್ದೇನೆ ಎಂದು ಹೇಳಿದರು.
ಕರ್ನಾಕದಲ್ಲಿ ರಾಜೀವ್ ಗಾಂದಿ ಯುನಿವರ್ಸಿಟಿ ಇದೆ ಅದನ್ನು ಮಹಾತ್ಮಾ ಗಾಂಧಿ ಯುನಿವರ್ಸಿಟಿ ಅಂತ ಇಡಲಿ, ಸಂಜಯ ಗಾಂಧಿ ಆಸ್ಪತ್ರೆ ಇದೆ. ಸಂಜಯ್ ಗಾಂಧಿ ಏನು ರಾಷ್ಟ್ರೀಯ ನಾಯಕರಲ್ಲ, ಅದಕ್ಕೂ ಮಹಾತ್ಮಾ ಗಾಂಧಿ ಹೆಸರಿಡಲಿ, ರಾಜ್ಯ ಕಾಂಗ್ರೆಸ್ ನಾಯಕರಿಗೆ ನೆಹರು ಕುಟುಂಬದ ಭಜನೆ ಬಿಟ್ಟರೆ ಬೇರೆ ಏನು ಇಲ್ಲ. ಮಹತ್ಮಾಗಾಂಧಿ ತತ್ವ ಕೊಲೆ ಮಾಡಿದ್ದು ಕಾಂಗ್ರೆಸ್ ನವರು. ಗಾಂಧಿಜಿ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ನ್ನು ವಿಸರ್ಜನೆ ಮಾಡಿ ಅಂತ ಹೇಳಿದ್ದರು. ಅದನ್ನು ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಮುಂದುವರೆಸಿಕೊಂಡು ಬಂದಿದೆ. ಮಹಾತ್ಮಾ ಗಾಂಧಿ ಹೆಸರು ಹೇಳಲು ಸಿಎಂ, ಡಿಸಿಎಂಗೆ ನೈತಿಕತೆಯಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾಯಕತ್ವ ಗೊಂದಲ ಹಿನ್ನೆಲೆಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಮೈಸೂರಿನಲ್ಲಿ ಭೇಟಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೋಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಅಸಮರ್ಥ ಆಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದೇ ಅವರ ನೀತಿ. ಗಡಿಯಾರ ಕೆಟ್ಟು ಹೋದರೂ ದಿನಕ್ಕೆ ಎರಡು ಬಾರಿ ಸರಿಯಾಗಿ ಸಮಯ ತೋರಿಸುತ್ತದೆ. ರಾಹುಲ್ ಭೇಟಿಯಿಂದ ರಾಜ್ಯಕ್ಕೆ ಏನೂ ಪ್ರಯೋಜ ಇಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ನ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿರುವ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖರ್ಗೆಯವರು ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಮೋದಿಯವರು ವಿಕಸಿತ ಭಾರತದ ಜೊತೆಗೆ ವಿರಾಸತ್ ಭಾರತ ಅಂತ ಹೇಳಿದ್ದಾರೆ. ವಿಶ್ವದಲ್ಲಿ ಭಾರತದ ಅಭಿವೃದ್ಧಿ ಶೇ 7.5 ರಷ್ಟಿದೆ. ಅಮೆರಿಕ ಶೇ 2, ಜಪಾನ್ ಶೇ. 3, ಚೀನಾ ಶೇ 4 ರಷ್ಟು ಅಭಿವೃದ್ಧಿ ಇದೆ. ನಮ್ಮ ಭಾರತದ ಗುರುತು ಸಂಸ್ಕಾರ ಸಂಸ್ಕೃತಿಯಲ್ಲಿದೆ. ಸೋಮನಾಥ ಟೆಂಪಲ್ ನಮ್ಮ ಸಂಸ್ಕೃತಿ ಧರ್ಮದ ಸಂಕೇತ. ಸೋಮನಾಥ ಟೆಂಪಲ್ ಮೇಲೆ ಮೂರು ಬಾರಿ ದಾಳಿಯಾದರೂ ಎದ್ದು ನಿಂತಿದೆ. ಅದೇ ರೀತಿ ನವ ಭಾರತ ಎದ್ದು ನಿಂತಿದೆ. ವಿರಾಸತನ್ನು ಜನರಿಗೆ ತಿಳಿಸಲು ಮೋದಿ ಅಲ್ಲಿಗೆ ಹೋಗಿದ್ದಾರೆ. ಅದು ಕಾಂಗ್ರೆಸ್ ನವರಿಗೆ ಅರ್ಥ ಆಗುವುದಿಲ್ಲ ಎಂದರು.
ಬಳ್ಳಾರಿಯಿಂದ ಪಾದಯಾತ್ರೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಬಳ್ಳಾರಿಯಲ್ಲಿ ಮೊದಲು ದೊಡ್ಡ ಪ್ರಮಾಣದಲ್ಲಿ ಸಮಾವೇಶ ಮಾಡುತ್ತೇವೆ. ಕಾಂಗ್ರೆಸ್ ವಿರುದ್ದ ಬರುವಂತ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪಾದಯಾತ್ರೆ ಮಾಡುತ್ತೇವೆ. ಈ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ನಮ್ಮ ಮೆಟ್ರೊ ಪಯಾಣ ದರ ಹೆಚ್ಚಳ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೆಟ್ರೊ ಅಧಿಕಾರಿಗಳು ರಾಜ್ಯ ಸರ್ಕಾರದವರು ಅವರು ವೆಚ್ಚವನ್ನು ಜನರ ಮುಂದಿಡಲಿ, ಯೋಜನೆಯಲ್ಲಿನ ವಿಳಂಬ, ದುಂದು ವೆಚ್ಚದಿಂದ ಸೋರಿಕೆಯಾಗುತ್ತಿದೆ. ಈಗೇನು ದರ ಏರಿಕೆ ಮಾಡುವ ಅವಶ್ಯಕತೆ ಇಲ್ಲ. ಮೆಟ್ರೊ ನಿರ್ವಹಣೆಯಲ್ಲಿ ಲೋಪ, ಭ್ರಷ್ಟಾಚಾರ ಇದೆ ಅದನ್ನು ಮುಚ್ಚಲು ಮೆಟ್ರೊ ಪ್ರಯಾಣ ದರ ಹೆಚ್ಚಿಸುತ್ತಿದ್ದಾರೆ ಎಂದು ಆರೋಪಿಸಿದರು.


