ಮಹಾಕುಂಭ ಮೇಳಕ್ಕೆ ಜನರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮಮಂದಿರ ದರ್ಶನದ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ.
ಕುಂಭಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಿಂದ 140 ಕಿ.ಮೀ. ದೂರದಲ್ಲಿರುವ ಅಯೋಧ್ಯೆಯ ರಾಮಮಂದಿರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಒತ್ತಡ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ 15ರಿಂದ 20 ದಿನಗಳ ಕಾಲ ಅಯೋಧ್ಯೆ ಭೇಟಿ ಮುಂದೂಡುವಂತೆ ರಾಮಜನ್ಮಭೂಮಿ ಟ್ರಸ್ಟ್ ಮನವಿ ಮಾಡಿತ್ತು.
ಇದೀಗ ಕುಂಭಮೇಳಕ್ಕೆ ಭೇಟಿ ನೀಡಿದವರು ಅಯೋಧ್ಯೆಗೂ ಭೇಟಿ ನೀಡುತ್ತಿರುವುದರಿಂದ ರಾಮಮಂದಿರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೂ ಮುನ್ನ ಬೆಳಿಗ್ಗೆ 7 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯುತ್ತಿತ್ತು. ಬೆಳಿಗ್ಗೆ 6 ಗಂಟೆಗೆ ಶ್ರೀನಗರ ಆರತಿ ನಡೆಯಲಿದೆ.
ಸಂಜೆ 4.30ಕ್ಕೆ ನಡೆಯುತ್ತಿದ್ದ ಮಂಗಳ ಆರತಿ ಕಾರ್ಯಕ್ರಮವನ್ನು 4 ಗಂಟೆಗೆ ನಡೆಸಲಿದ್ದು, ಅರ್ಧಗಂಟೆ ಮುಂಚಿತವಾಗಿ ನಡೆಸಲು ತೀರ್ಮಾನಿಸಲಾಗಿದೆ. ನಂತರ ಕೆಲವೇ ನಿಮಿಷಗಳಲ್ಲಿ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ರಾತ್ರಿ 7 ಗಂಟೆಗೆ ಸಂಧ್ಯಾ ಆರತಿ ನಡೆಯಲಿದ್ದು, 15 ನಿಮಿಷಗಳಷ್ಟೇ ಬಾಗಿಲು ತೆರೆಯಲಿದ್ದು, ನಂತರ ದೇವಸ್ಥಾನ ಮುಚ್ಚಲಾಗುವುದು.
ಮಧ್ಯಾಹ್ನ 12 ಗಂಟೆಯಿಂದ ರಾಜ್ ಭೋಗ್ ಆರಂಭವಾಗಲಿದ್ದು, ಮಧ್ಯಾಹ್ನದ ಭೋಜನ ವ್ಯವಸ್ಥೆ ಇರಲಿದೆ. ರಾತ್ರಿ 10 ಗಂಟೆಗೆ ದಿನದ ಕೊನೆಯ ಶ್ಯಾಮ್ ಪೂಜಾ ನಡೆಯಲಿದ್ದು, ನಂತರ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ಆಗ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಟ್ರಸ್ಟ್ ತಿಳಿಸಿದೆ.