ಆಸ್ಟ್ರೇಲಿಯಾ ತಂಡ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 16 ವರ್ಷಗಳ ನಂತರ ಸೆಮಿಫೈನಲ್ ಪ್ರವೇಶಿಸಿದರೆ, ಆಫ್ಘಾನಿಸ್ತಾನದ ಸ್ಥಿತಿ ಅತಂತ್ರವಾಗಿದೆ.
ಪಾಕಿಸ್ತಾನದ ಲಾಹೋರ್ ನಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ಮತ್ತು ಆಫ್ಘಾನಿಸ್ತಾನ ನಡುವಣ ಬಿ ಗುಂಪಿನ ಪಂದ್ಯ ಮಳೆಯಿಂದ ರದ್ದುಗೊಂಡಿತು. ಇದರಿಂದ ಉಭಯ ತಂಡಗಳು ಅಂಕಗಳನ್ನು ಹಂಚಿಕೊಳ್ಳಬೇಕಾಯಿತು.
ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ 50 ಓವರ್ ಗಳಲ್ಲಿ 274 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಆಸ್ಟ್ರೇಲಿಯಾ ತಂಡ 12.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 109 ರನ್ ಗಳಿಸಿದ್ದಾಗ ಸುರಿದ ಮಳೆ ಪಂದ್ಯವನ್ನು ಆಹುತಿ ಪಡೆಯಿತು.
ಇದರೊಂದಿಗೆ ಆಸ್ಟ್ರೇಲಿಯಾ ತಂಡ 4 ಅಂಕದೊಂದಿಗೆ ಬಿ ಗುಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದರೆ, ಶನಿವಾರ ನಡೆಯಲಿರುವ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ದಕ್ಷಿಣ ಆಫ್ರಿಕಾ ಸೋಲಿಸಿದರೆ ಆಫ್ಘಾನಿಸ್ತಾನದ ಸೆಮಿಫೈನಲ್ ರೇಸ್ ನಿಂದ ಹೊರಬೀಳಲಿದೆ.
ಒಂದು ವೇಳೆ ಇಂಗ್ಲೆಂಡ್ ವಿರುದ್ಧ ದ.ಆಫ್ರಿಕಾ ಸೋತರೆ ಆಫ್ಘಾನಿಸ್ತಾನ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕುವ ಅವಕಾಶ ಹೊಂದಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಸೋತರೂ ಇಂಗ್ಲೆಂಡ್ ತಂಡವನ್ನು 200ಕ್ಕಿಂತ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರೆ ದ.ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಬಹುದು.