ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಎದುರು ಭಾರತ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಕಿವೀಸ್ ಪಡೆಯ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.
ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಶ್ರೇಯಸ್ ಅಯ್ಯರ್ 77 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 45 ರನ್ ಹೊಡೆದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು. 250 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ತಂಡವೇ ಜಯ ಗಳಿಸಲಿದೆ ಎಂಬ ಪರಿಸ್ಥಿತಿ ಇತ್ತಾದರೂ ಟೀಮ್ ಇಂಡಿಯಾದ ಸ್ಪಿನ್ನರ್ ವರುಣ್ ಚಕ್ರವರ್ತಿ ಪಂದ್ಯದ ಚಿತ್ರವನ್ನೇ ಅದಲು ಬದಲು ಮಾಡುವಲ್ಲಿ ಯಶಸ್ವಿಯಾದರು.
10 ಓವರ್ಗಳಲ್ಲಿ 42 ರನ್ ನೀಡಿದ ವರುಣ್ ಚಕ್ರವರ್ತಿ 5 ಪ್ರಮುಖ ವಿಕೆಟ್ ಕಬಳಿಸಿದರು. 45.3 ಓವರ್ಗಳಲ್ಲಿ 205 ರನ್ ಗಳಿಸಿ ನ್ಯೂಝಿಲೆಂಡ್ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 44 ರನ್ಗಳ ಜಯ ಸಾಧಿಸಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ನ್ಯೂಝಿಲೆಂಡ್ ತಂಡವನ್ನು ಮಣಿಸಿದೆ. 2000 ರಲ್ಲಿ ಉಭಯ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಭಾರತ ತಂಡಕ್ಕೆ 4 ವಿಕೆಟ್ಗಳ ಸೋಲಿನೊಂದಿಗೆ ನ್ಯೂಝಿಲೆಂಡ್ ಟ್ರೋಫಿ ಗಳಿಸಿತ್ತು. ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ಪಡೆಯನ್ನು ಸೋಲಿಸಲು ಟೀಮ್ ಇಂಡಿಯಾಗೆ ಸಾಧ್ಯವಾಗಿರಲಿಲ್ಲ. 25 ವರ್ಷಗಳ ಬಳಿಕ ಭಾರತೀಯ ತಂಡ ನ್ಯೂಝಿಲೆಂಡ್ ತಂಡವನ್ನು ಸೋಲಿಸಿದೆ.
ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡ, ಮಾರ್ಚ್ 5 ರಂದು ಜರುಗಲಿರುವ ಎರಡನೇ ಸೆಮಿಫೈನಲ್ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಲಿದೆ.