ಮಹಿಳೆಯರಲ್ಲಿ ಅತ್ಯಂತ ಮಾರಕ ಕಾಯಿಲೆಯಾಗಿ ಗರ್ಭಕಂಠದ ಕ್ಯಾನ್ಸರ್ ವ್ಯಾಪಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಪರೀಕ್ಷೆಗಳು ದುಬಾರಿಯಾಗಿದ್ದು, ಹೆಚ್ಚಿನ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆದರೆ ಈಗ ಏಮ್ಸ್ ವೈದ್ಯರು ಕೇವಲ 100 ರೂ.ಗೆ ಲಭ್ಯವಾಗುವ ಎರಡು ಗಂಟೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಡಯಾಗ್ನಿಸ್ಟಿಕ್ ಕಿಟ್ ಅಭಿವೃದ್ಧಿಪಡಿಸಿದ್ದಾರೆ.
ಈ ಹೊಸ ನ್ಯಾನೊ ತಂತ್ರಜ್ಞಾನ ಆಧಾರಿತ ಕಿಟ್ ಮೂಲಕ ಗರ್ಭಕಂಠದ ಕ್ಯಾನ್ಸರ್ ಪತ್ತೆ ತುಂಬಾ ಸುಲಭ, ದೀರ್ಘ ಕಾಲಾವಕಾಶ ಕೂಡ ಬೇಕಿಲ್ಲ. ಇದರಿಂದ ಹೆಚ್ಚಿನ ಮಹಿಳೆಯರು ಇದರ ಲಾಭ ಪಡೆಯಬಹುದು. ಈ ಕಿಟ್ ಅಭಿವೃದ್ಧಿಪಡಿಸುವಲ್ಲಿ ಏಮ್ಸ್‌ನ ಅಂಗರಚನಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸುಭಾಷ್ ಚಂದ್ರ ಯಾದವ್, ಸ್ತ್ರೀರೋಗ ವಿಭಾಗದ ಮಾಜಿ ಮುಖ್ಯಸ್ಥೆ ಡಾ. ನೀರ್ಜಾ ಭಟ್ಲಾ ಮತ್ತು ಸಂಶೋಧಕರಾದ ಜ್ಯೋತಿ ಮೀನಾ, ಶಿಖಾ ಚೌಧರಿ ಮತ್ತು ಪ್ರಣಯ್ ತನ್ವರ್ ಸೇರಿದ್ದಾರೆ. ಕಿಟ್ ಮೂಲಕ 400 ರೋಗಿಗಳ ಪರೀಕ್ಷಿಸಲಾಗಿದ್ದು, 100% ನಿಖರತೆ ಕಂಡುಬಂದಿದೆ ಎಂದು ತಂಡ ತಿಳಿಸಿದೆ.
ಏಮ್ಸ್ ವೈದ್ಯರು ಹೇಳುವಂತೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆಗೆ ಸುಮಾರು ಆರು ಸಾವಿರ ರೂಪಾಯಿಗಿಂತಲೂ ಹೆಚ್ಚಾಗುತ್ತಿತ್ತು. ಏಮ್ಸ್ ನಂತಹ ಸರ್ಕಾರಿ ಸಂಸ್ಥೆಯಲ್ಲಿಯೂ ಇದರ ವೆಚ್ಚ 2,000–3,000 ರೂ.ಗಳಷ್ಟಿತ್ತು. ಈ ಕಿಟ್‌ಮೂಲಕ ಪರೀಕ್ಷೆಯನ್ನು ಕೇವಲ 100 ರೂ.ಗಳಿಗೆ ಮಾಡಲು ಸಾಧ್ಯವಾಗುತ್ತದೆ. ಇದರ ಬಳಕೆ ತುಂಬಾ ಸುಲಭವಾಗಿದ್ದು, ವೈದ್ಯರು, ದಾದಿಯರು ಮತ್ತು ಆಶಾ ಕಾರ್ಯಕರ್ತರು ಬಳಸಬಹುದು. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಪರಿಹಾರ,ಅನುಕೂಲವನ್ನು ನೀಡುತ್ತದೆ, ಸ್ವಯಂ ಪರೀಕ್ಷೆಗೆ ಈ ಕಿಟ್ ಇನ್ನೂ ಲಭ್ಯವಿಲ್ಲ ಎಂದು ತಂಡ ಹೇಳಿದೆ.