Menu

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಉತ್ತರ ಕೊಡಬೇಕಿರೋದು ಕೇಂದ್ರ: ಡಿಕೆ ಶಿವಕುಮಾರ್

“ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಉತ್ತರ ಕೊಡಬೇಕಾಗಿರುವುದು ಕೇಂದ್ರ ಸರ್ಕಾರ. ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ ವಿಚಾರವಾಗಿ ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ಸೇರಿ ರಾಜ್ಯ ಸರ್ಕಾರಕ್ಕೆ ದುಬಾರಿಯಾಗುವ ತೀರ್ಮಾನ ಕೈಗೊಂಡಿದ್ದೇವೆ. ರಾಜ್ಯದ ಸಮಸ್ಯೆಗಳ ಬಗ್ಗೆ ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ” ಎಂದು  ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ ಎಂದು ಕೇಳಿದಾಗ, “ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ ವಿಚಾರವಾಗಿ ಕೇಂದ್ರ ಸರ್ಕಾರ ಈವರೆಗೂ ಬಾಯಿ ಬಿಟ್ಟಿಲ್ಲ. ಬಿಜೆಪಿಯ ಸಂಸದರು ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿಲ್ಲ. ಬೊಮ್ಮಾಯಿ ಅವರು ರಾಜ್ಯ ಸರ್ಕಾರ ಖರೀದಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಕೇಂದ್ರ ಸರ್ಕಾರದ ಪಾಲೇನು? ಇದರ ತೀರ್ಮಾನ ಮಾಡುವವರು ಯಾರು? ಪ್ರತಿಯೊಂದಕ್ಕೂ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಆದರೂ ಈವರೆಗೆ ಈ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪರಿಹಾರ ನೀಡಲೆಂದೇ ನಾವಿದ್ದೇವೆ. ಇದರಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಇದೆಯಲ್ಲವೇ? ಇಲ್ಲಿಯವರೆಗೂ ಬೊಮ್ಮಾಯಿ ಅವರು ಯಾಕೆ ಸಂಸತ್ತಿನಲ್ಲಿ ಈ ವಿಚಾರವಾಗಿ ಧ್ವನಿ ಎತ್ತಿಲ್ಲ? ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿಲ್ಲ?” ಎಂದು ಪ್ರಶ್ನಿಸಿದರು.

ನೀರಾವರಿ ಸಮಸ್ಯೆ ಹಾಗೂ ಯೋಜನೆ ಅನುಷ್ಠಾನವಾಗದಿರುವ ಬಗ್ಗೆ ಕೇಳಿದಾಗ, “ನನ್ನ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಮಾಡಿದಷ್ಟು ಯೋಜನೆ ಇಲಾಖೆಯ ಇತಿಹಾಸದಲ್ಲಿ ಯಾರೂ ಮಾಡಿಲ್ಲ. ಈ ವಿಚಾರವಾಗಿ ನಾನು ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ, ವಿರೋಧ ಪಕ್ಷಗಳು ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಲಿ, ಅಲ್ಲಿ ಉತ್ತರಿಸುತ್ತೇನೆ ” ಎಂದು ತಿಳಿಸಿದರು.

ಕಾಂಗ್ರೆಸ್ ನಲ್ಲಿ ಸಚಿವರಾಗಬೇಕಾದರೆ 500 ಕೋಟಿ ನೀಡಬೇಕು ಎಂಬ ನವಜೋತ್ ಸಿಂಗ್ ಸಿಧು ಅವರ ಪತ್ನಿ ಹೇಳಿಕೆ ವಿಚಾರವಾಗಿ ಕೇಳಿದಾಗ, “ಈ ರೀತಿ ಹೇಳಿದವರನ್ನು ಆಸ್ಪತ್ರೆಗೆ ಸೇರಿಸೋಣ. ಒಳ್ಳೆಯ ಮೆಂಟಲ್ ಆಸ್ಪತ್ರೆಗೆ ಸೇರಿಸೋಣ” ಎಂದು ಹೇಳಿದರು.

ಡಿ. 20ರ ವೇಳೆಗೆ ದೆಹಲಿಗೆ ತೆರಳುತ್ತೀರಾ ಎಂದು ಕೇಳಿದಾಗ, “ಹೈದರಾಬಾದ್ ನಲ್ಲಿ ಜಾಗತಿಕ ಸಮ್ಮೇಳನ ಮಾಡುತ್ತಿದ್ದಾರೆ. ನಮ್ಮ ನೆರೆ ರಾಜ್ಯದವರು ನಮಗೆ ಆಹ್ವಾನ ನೀಡಿದ್ದು, ಅದಕ್ಕೆ ನಾನು ಹಾಗೂ ಕೆಲವು ಅಧಿಕಾರಿಗಳು ತೆರಳುತ್ತಿದ್ದೇವೆ. ಮಿಕ್ಕ ವಿಚಾರವನ್ನು ಮುಂದೆ ಮಾತನಾಡೋಣ” ಎಂದರು.

Related Posts

Leave a Reply

Your email address will not be published. Required fields are marked *