ನವದೆಹಲಿ: ಸಮುದ್ರದಲ್ಲಿ ಕಣ್ಗಾವಲು ಇಡುವ ಉದ್ದೇಶದಿಂದ 26 ರಾಫೆಲ್ ಎಂ ಯುದ್ಧ ವಿಮಾನಗಳ ಖರೀದಿಗೆ 63 ಸಾವಿರ ಕೋಟಿ ರೂ. ವಿನಿಯೋಗಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಭಾರತದ ನೌಕಾಪಡೆಗೆ ಬಲ ತುಂಬಲು ಕೇಂದ್ರ ಅತೀ ದೊಡ್ಡ ಮೊತ್ತ ವಿನಿಯೋಗಿಸಲು ತೀರ್ಮಾನಿಸಲಾಗಿದ್ದು, ಮಾಸಾಂತ್ಯದಲ್ಲಿ ಫ್ರಾನ್ಸ್ ರಕ್ಷಣಾ ಸಚಿವರೊಂದಿಗೆ ರಾಫೆಲ್ ಖರೀದಿ ಕುರಿತು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.
ರಾಫೆಲ್ ಯುದ್ಧ ವಿಮಾನಗಳ ಪೂರ್ಣ ಪ್ಯಾಕೇಜ್ ಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಇದರಲ್ಲಿ ವಿಮಾನ ಸಾಗಾಟ, ಉಸ್ತುವಾರಿ, ನಿರ್ವಹಣೆ ಹಾಗೂ ವಿಮಾನಗಳು ಪೂರ್ಣ ಪ್ರಮಾಣದಲ್ಲಿ ಅತ್ಯಾಧುನಿಕವಾಗಿ ಸಿದ್ಧಪಡಿಸಿರುವುದನ್ನು ವಿತರಿಸುವುದು ಸೇರಿವೆ.
ಎರಡೂ ದೇಶಗಳ ನಡುವೆ ಒಪ್ಪಂದ ಮಾಡಿಕೊಂಡ 5 ವರ್ಷಗಳಲ್ಲಿ 26 ರಾಫೆಲ್ ಎಂ ಯುದ್ಧ ವಿಮಾನಗಳನ್ನು ಪೂರೈಸಬೇಕಿದೆ. ಈ ವಿಮಾನಗಳಲ್ಲಿ 22 ಸಿಂಗಲ್ ಸೀಟ್ ಹಾಗೂ 4 ಡಬಲ್ ಸೀಟರ್ ಗಳಾಗಿವೆ. ಈ ಯುದ್ಧ ವಿಮಾನಗಳನ್ನು ಐಎನ್ ಎಸ್ ವಿಕ್ರಾಂತ್ ನಲ್ಲಿ ನಿಯೋಜಿಸಲಾಗುವುದು.
ಭಾರತ ಸಮುದ್ರದ ಗಡಿಯಲ್ಲಿ ಚೀನಾ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಗಾ ಇಡಲು ಹಾಗೂ ಸಾಂಭವ್ಯ ದಾಳಿ ಎದುರಿಸಲು ಸಜ್ಜಾಗುವ ಉದ್ದೇಶದಿಂದ ರಾಫೆಲ್ ಯುದ್ಧ ವಿಮಾನಗಳನ್ನು ಖರೀದಿಸಿ ನೌಕಾಪಡೆ ಬಲವೃದ್ಧಿಸುವುದಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.