ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. 30 ವರ್ಷಗಳ ಈ ಬೇಡಿಕೆ ಈಗ ನನಸಾಗಲಿದ್ದು, ಕರ್ನಾಟಕದ ಜನತೆಗೆ ಇದು ಸಂತಸದ ಸುದ್ದಿ ಎಂದಿದ್ದಾರೆ.
ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ “ಬೆಂಗಳೂರು ಮತ್ತು ಮುಂಬೈ ನಡುವೆ ಶೀಘ್ರದಲ್ಲೇ ಸೂಪರ್‌ಫಾಸ್ಟ್ ರೈಲು ಪ್ರಾರಂಭವಾಗಲಿದೆ. ಎರಡೂ ನಗರಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದು, ನಿಲ್ದಾಣಗಳ ಸಾಮರ್ಥ್ಯ ವಿಸ್ತರಣೆಗೊಂಡಿರುವುದರಿಂದ ಇದು ಸಾಧ್ಯವಾಗಿದೆ” ಎಂದು ಹೇಳಿದ್ದಾರೆ.
ಇದುವರೆಗೆ ಈ ಎರಡು ನಗರಗಳನ್ನು ಕೇವಲ ಉದ್ಯಾನ ಎಕ್ಸ್‌ಪ್ರೆಸ್ ಮಾತ್ರ ಸಂಪರ್ಕಿಸುತ್ತಿದ್ದು, ಪ್ರಯಾಣ ಮುಗಿಸಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಕಳೆದ ವರ್ಷವೊಂದರಲ್ಲೇ 26 ಲಕ್ಷಕ್ಕೂ ಹೆಚ್ಚು ಜನರು ವಿಮಾನ ಪ್ರಯಾಣಕ್ಕೆ ಅವಲಂಬಿತರಾಗಿದ್ದರು.
“ಹೊಸ ಸೂಪರ್‌ಫಾಸ್ಟ್ ರೈಲು ಸೇವೆ ಲಕ್ಷಾಂತರ ಜನರಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ವೇಗವಾದ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸಲಿದೆ” ಎಂದು ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಸಂಸತ್ತಿನಲ್ಲಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಸಭೆಗಳಲ್ಲಿ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ನಡೆಸಿದ ನಿರಂತರ ಪ್ರಯತ್ನಗಳ ಫಲವಾಗಿ ಇದು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದ ಜನತೆ ಮತ್ತು ಕನ್ನಡಿಗರ ಪರವಾಗಿ, ಈ ದೀರ್ಘಕಾಲದ ಕನಸನ್ನು ನನಸಾಗಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ತೇಜಸ್ವಿ ಸೂರ್ಯ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಜೊತೆಗೆ, ಈ ಕಾರ್ಯಕ್ಕೆ ಬೆಂಬಲ ನೀಡಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಹ ಧನ್ಯವಾದಗಳಿದ್ದಾರೆ.