ಕರ್ನಾಟಕದಲ್ಲಿ 9.67 ಲಕ್ಷ ಟನ್ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಸಮ್ಮತಿಸುವ ಮೂಲಕ ರೈತರ ನೆರವಿಗೆ ಮುಂದಾಗಿದೆ. ಕ್ವಿಂಟಾಲ್‌ಗೆ ₹8,000 ರೂ. ಬೆಂಬಲ ಬೆಲೆ ಪ್ರಕಟಿಸಿದೆ. ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ನ್ಯಾಫೆಡ್ ಮತ್ತು ಮತ್ತು ಎನ್‌ಸಿಸಿಎಫ್ ಮೂಲಕ ತೊಗರಿ ಖರೀದಿಗೆ ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈ ವಿಚಾರ ತಿಳಿಸಿದ್ದು, ಕರ್ನಾಟಕದಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕೂಡಲೇ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಮುಂದಾಗುವಂತೆ ಕೋರಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆಯಲಾಇದ್ದು, ಕೂಡಲೇ ಸ್ಪಂದಿಸಿರುವ ಕೃಷಿ ಸಚಿವರು ತೊಗರಿ ಖರೀದಿಗೆ ಅನುಮೋದನೆ ನೀಡಿದ್ದಾಗಿ ಹೇಳಿದ್ದಾರೆ.
2025-26 ತೊಗರಿ ಖರೀದಿಗಾಗಿ ಬೆಲೆ ಬೆಂಬಲ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವರು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದಾರೆ. ಖರೀದಿ ಪ್ರಾರಂಭದ ದಿನಾಂಕದಿಂದ 90 ದಿನಗಳವರೆಗೆ ರಾಜ್ಯದಲ್ಲಿ ಪಿಎಸ್‌ಎಸ್ ಅಡಿ ಒಟ್ಟು 9,67,000 ಮಟ್ರಿಕ್ ಟನ್ ತೊಗರಿ ಖರೀದಿಗೆ ಅನುಮೋದನೆ ನೀಡಿದೆ ಎಂದು ಶಿವರಾಜ್ ಸಿಂಗ್ ಚೌವ್ಹಾಣ್ ಪತ್ರದಲ್ಲಿ ತಿಳಿಸಿರುವುದಾಗಿ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
2025-26ಕ್ಕೆ ಅಂದಾಜು 12.60 ಎಲ್‌ಎಂಟಿ ತೊಗರಿ ಬೆಳೆ ಉತ್ಪಾದನೆ ರಾಜ್ಯದಲ್ಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ₹ 5,830 ರಿಂದ 6, 700 ಬೆಲೆ ಇದೆ. 2025-26ಕ್ಕೆ ತೊಗರಿ ಬೆಳೆಗೆ ಘೋಷಿಸಲಾದ ಎಂಎಸ್ಪಿ ಕ್ವಿಂಟಾಲ್‌ಗೆ ₹. 8,000 ಆಗಿದೆ. ಮಾರುಕಟ್ಟೆ ಬೆಲೆ ಇದಕ್ಕಿಂತ ಕಡಿಮೆಯಿದೆ. ಕೂಡಲೇ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗಿ ರೈತರ ನೆರವಿಗೆ ಬರುವಂತೆ ಸಚಿವ ಜೋಶಿ ಕೇಂದ್ರಕ್ಕೆ ಮನವಿ ಮಾಡಿದ್ದರು.
2025-26 ಸಾಲಿನಲ್ಲಿ ನ್ಯಾಫೆಡ್ ಮತ್ತು ಮತ್ತು ಎನ್‌ಸಿಸಿಎಫ್ ಮೂಲಕ ತೊಗರಿ ಖರೀದಿಗೆ ಅನುಮೋದನೆ ಅಗತ್ಯವಿದ್ದು, ಇದರಿಂದ ತೊಗರಿ ಮಾರಾಟ ತೊಂದರೆ ತಡೆದು ರೈತರಿಗೆ ನ್ಯಾಯಯುತ ಬೆಲೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಜೋಶಿ ಕೃಷಿ ಸಚಿವರಿಗೆ ಮನವಿ ಮಾಡಿದ್ದರು.
ಧನ್ಯವಾದ ಹೇಳಿದ ಆರ್ ಅಶೋಕ
ರಾಜ್ಯದ ತೊಗರಿ ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಯೋಜನೆಯಡಿ (MSP) 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅಧಿಕೃತ ಅನುಮೋದನೆ ನೀಡಿದೆ. ತೊಗರಿ ಬೆಳೆಗಾರರ ಸಂಕಷ್ಟಗಳನ್ನು ಮನಗಂಡು ತಕ್ಷಣ ಸ್ಪಂದಿಸಿದ ಪ್ರಧಾನಮಂತ್ರಿ ಶ್ರೀ @narendramodi ಹಾಗೂ ಕೇಂದ್ರ ಕೃಷಿ ಸಚಿವ ಶ್ರೀ @ChouhanShivraj ಅವರಿಗೆ ಕರ್ನಾಟಕದ ತೊಗರಿ ಬೆಳೆಗಾರರ ಪರವಾಗಿ ಧನ್ಯವಾದಗಳು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
ಸಕಾಲಕ್ಕೆ ಕೇಂದ್ರದ ಗಮನವನ್ನು ಸೆಳೆಯುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಕೇಂದ್ರ ಸಚಿವ ಶ್ರೀ @JoshiPralhad ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಖರೀದಿ ಪ್ರಮಾಣ: 9,67,000 ಮೆಟ್ರಿಕ್ ಟನ್, MSP (2025–26): ಕ್ವಿಂಟಾಲ್‌ಗೆ ₹8,000 ಕೇಂದ್ರದಿಂದ ಘೋಷಣೆಯಾಗಿದ್ದು, ನಾಡಿನ ಅನ್ನದಾತರ ಸಂಕಷ್ಟ ಅರಿತು ತಡ ಮಾಡದೆ ಸ್ಪಂದಿಸಿದ ಮೋದಿ ಸರ್ಕಾರದ ರೈತ ಪರ ಕಾಳಜಿ, ಬದ್ಧತೆ ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದ್ದಾರೆ.


