Menu

ಕೇಂದ್ರ ಹಿಂದಿ ಹೇರಿಕೆ: ಚಂದ್ರಬಾಬು ನಾಯ್ಡು ಜಾಣತನದ ಹೇಳಿಕೆ

ಅಮರಾವತಿ: ಕೇಂದ್ರ ಸರಕಾರದ ಹಿಂದಿ ಹೇರಿಕೆಯು ದಕ್ಷಿಣ ಭಾರತದಲ್ಲಿ ದೊಡ್ಡ ಜ್ವಾಲಾಮುಖಿ ಸೃಷ್ಟಿಸುವ ಸೂಚನೆ ಇದ್ದು, ಕ್ರಮೇಣ ರಾಜಕೀಯ ಮುಖಂಡರು ಈ ವಿಚಾರದ ಬಗ್ಗೆ ಮಾತಾನಾಡಲು ಆರಂಭಿಸಿದ್ದಾರೆ.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ನರ ಚಂದ್ರಬಾಬು ನಾಯ್ಡು,  ಈ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದು ಅತಿ ಜಾಣತನ ತೋರಲು ಪ್ರಯತ್ನಿಸಿದ್ದಾರೆ.

ಹಿಂದಿ ಪರವಾಗಿ ಬ್ಯಾಟ್ ಬೀಸಿ ಎಲ್ಲರಿಂದಲೂ ಮಂಗಳಾರತಿ ಮಾಡಿಸಿಕೊಂಡ ತಮ್ಮ ಡಿಸಿಎಂ ಪವನ್ ಕಲ್ಯಾಣ್ ಅವರ ಉದಾಹರಣೆ ಕಣ್ಣಮುಂದೆ ಇರುವುದರಿಂದ ನಾಯ್ಡು ಸ್ಪಷ್ಟ ನಿಲುವು ತಾಳಲು ಹಿಂಜರಿದಿದ್ದಾರೆ.

ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಜನರು ಮಾತ್ರ ಪ್ರಪಂಚದಾದ್ಯಂತ ಯಶಸ್ವಿಯಾಗಿದ್ದಾರೆ. ಇಂಗ್ಲಿಷ್ ಭಾಷೆ ಮಾತ್ರ ಜ್ಞಾನವನ್ನು ಖಾತರಿಪಡಿಸುತ್ತದೆ ಎಂಬ ತಪ್ಪು ಕಲ್ಪನೆ ಪ್ರಚಲಿತವಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ವಿಧಾನಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ‘ಭಾಷೆ ಸಂವಹನಕ್ಕಾಗಿ ಮಾತ್ರ. ಜ್ಞಾನವು ಭಾಷೆಯೊಂದಿಗೆ ಬರುವುದಿಲ್ಲ. ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಜನರು ಮಾತ್ರ ಪ್ರಪಂಚದಾದ್ಯಂತ ಯಶಸ್ವಿಯಾಗಿದ್ದಾರೆ. ಮಾತೃಭಾಷೆಯ ಮೂಲಕ ಕಲಿಯುವುದು ಸುಲಭ’ ಎಂದು ತಿಳಿಸಿದ್ದಾರೆ.

‘ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಭಾಷೆ ಇರುವುದು ದ್ವೇಷಿಸಲು ಅಲ್ಲ. ಇಲ್ಲಿ (ಆಂಧ್ರಪ್ರದೇಶ) ಮಾತೃಭಾಷೆ ತೆಲುಗು. ರಾಷ್ಟ್ರೀಯ ಭಾಷೆ ಹಿಂದಿ ಮತ್ತು ಅಂತರರಾಷ್ಟ್ರೀಯ ಭಾಷೆ ಇಂಗ್ಲಿಷ್’ ಎಂದು ನಾಯ್ಡು ಹೇಳಿದ್ದಾರೆ.

ಮಾತೃಭಾಷೆಯನ್ನು ಮರೆಯದೆ ಜೀವನೋಪಾಯಕ್ಕಾಗಿ ಸಾಧ್ಯವಾದಷ್ಟು ಇತರ ಭಾಷೆಗಳನ್ನು ಕಲಿಯುವುದು ಮುಖ್ಯ. ಹಿಂದಿ ಕಲಿಯುವುದರಿಂದ ದೆಹಲಿಯಲ್ಲಿ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಜಪಾನ್ ಮತ್ತು ಜರ್ಮನಿಯಂತಹ ಇತರ ದೇಶಗಳಿಗೆ ಅನೇಕ ಜನರು ಹೋಗುತ್ತಿರುವುದರಿಂದ, ಆ ಭಾಷೆಗಳನ್ನು ಇಲ್ಲಿಯೂ ಕಲಿಯಲು ಸಾಧ್ಯವಾದರೆ, ಜನರು ಆ ವಿದೇಶಿ ತಾಣಗಳಿಗೆ ಭೇಟಿ ನೀಡಿದಾಗ ತುಂಬಾ ಸಹಾಯಕವಾಗುತ್ತದೆ. ಆದ್ದರಿಂದ, ‘ಭಾಷೆಗಳ ಮೇಲೆ ಅನಗತ್ಯ ರಾಜಕೀಯ’ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯುವಂತೆ ಚಂದ್ರಬಾಬು ನಾಯ್ಡು ಜನರಿಗೆ ಕರೆ ನೀಡುವ ಮೂಲಕ ಜಾಣ್ಮೆ ಮೆರೆದಿದ್ದಾರೆ.

Related Posts

Leave a Reply

Your email address will not be published. Required fields are marked *